ಸಮಾಜದ ಹಿತಕ್ಕಾಗಿ ಶ್ರಮಿಸುತ್ತಿರುವ ಸಫಾಯಿ ಕರ್ಮಚಾರಿಗಳ ಹಿತ ಕಾಯಿರಿ: ಡಾ ಪಿ.ಪಿ ವಾವಾ

ಸಮಾಜದ ಹಿತಕ್ಕಾಗಿ ಶ್ರಮಿಸುತ್ತಿರುವ ಸಫಾಯಿ ಕರ್ಮಚಾರಿಗಳ ಹಿತ ಕಾಯಿರಿ: ಡಾ ಪಿ.ಪಿ ವಾವಾ
Published on

ಹಾಸನ : ಸಫಾಯಿ ಕರ್ಮಚಾರಿಗಳಿಗೆ ಅನೇಕ ಯೋಜನೆಗಳಿದ್ದು, ಈ ಬಗ್ಗೆ ಸೂಕ್ತ ಅರಿವು ಮೂಡಿಸಿ ಅವರ ಅರ್ಥಿಕ, ಸಾಮಾಜಿಕ ಸ್ಥಿತಿ ಸುಧಾರಣೆಗೆ ಶ್ರಮಿಸಬೇಕು ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಡಾ ಪಿ.ಪಿ ವಾವಾ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ನಿಷೇಧ ಹಾಗೂ ಪುನರ್ವಸತಿ ಕಾಯ್ದೆ 2013 ರ ಅನುಷ್ಠಾನ ಪರಿಶೀಲನೆ ಮತ್ತು ಮೌಲ್ಯಮಾಪನ ಸಭೆ ನಡೆಸಿ ಮಾತನಾಡಿದ ಅವರು, ಸಂವಿಧಾನ ಬದ್ಧ ಹಕ್ಕುಗಳು ಉಲ್ಲಂಘನೆಯಾಗದಂತೆ ಸಫಾಯಿ ಕರ್ಮಚಾರಿಗಳಿಗೆ ಸಾಮಾಜಿಕ ನ್ಯಾಯ ದೊರೆಯಬೇಕು ಎಂದು ಹೇಳಿದರು.

ಶೌಚ ಗುಂಡಿಗಳನ್ನು ಕೈಯಿಂದ ಸ್ವಚ್ಛಗೊಳಿಸುವುದು, ಮಲ ಹೊರುವ, ಸಾಗಿಸುವ ಕೆಲಸಗಳನ್ನು ನಿಷೇಧಿಸಲಾಗಿದೆ. ಈ ವೃತ್ತಿಯಲ್ಲಿ ತೊಡಗಿದವರನ್ನು ಗುರುತಿಸಿ ಪುನರ್ವಸತಿ ನೀಡಬೇಕಿದೆ. ಅವರನ್ನು ಅವಲಂಬಿತರಿಗೆ ಭತ್ಯೆ ಹಾಗೂ ಇತರ ಸೌಲಭ್ಯ ಒದಗಿಸಬೇಕಿದ್ದು, ಸ್ಥಳೀಯ ಆಡಳಿತಗಳು ಈ ಬಗ್ಗೆ ಗಮನ ಹರಿಸಬೇಕಿದೆ ಎಂದರು.

ಸಫಾಯಿ ಕರ್ಮಚಾರಿ ಆಯೋಗ ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರ ಸಫಾಯಿ ಕರ್ಮಚಾರಿಗಳು ಹಾಗೂ ಅವರ ಅವಲಂಬಿತರನ್ನು ಮುಖ್ಯವಾಹಿನಿಗೆ ತರಲು ಹಾಗೂ ಅವರ ಶ್ರೇಯೋಭಿವೃದ್ಧಿಗೆ ಹತ್ತಾರು ಯೋಜನೆ ರೂಪಿಸಿವೆ. ಅದರ ಬಗ್ಗೆ ಅರಿವು ಮೂಡಿಸಿ ಸೌಲಭ್ಯ ಒದಗಿಸಬೇಕು ಎಂದು ಹೇಳಿದರು.

ಸಫಾಯಿ ಕರ್ಮಚಾರಿಗಳಿಗೆ ನೀಡುವ ಆರ್ಥಿಕ ನೆರವಿನ ಯೋಜನೆಗಳಲ್ಲಿ ಹೆಚ್ಚಿನ ಸಬ್ಸಿಡಿ ಹಾಗೂ ಶೇ.4 ರಷ್ಟು ಬಡ್ಡಿಯ ಸಾಲ ಸೌಲಭ್ಯ ಇದ್ದು ಅದು ಸದ್ಬಳಕೆಯಾಗಬೇಕು. ಆ ಮೂಲಕ ಸಫಾಯಿ ಕರ್ಮಚಾರಿಗಳ ಕೌಟುಂಬಿಕ ಸ್ಥಿತಿ ಉತ್ತಮವಾಗಲು ನವ ದೆಹಲಿಯಲ್ಲಿರುವ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ಹಣಕಾಸು ನಿಗಮದಿಂದ 85 ವಿವಿಧ ರೀತಿಯ ವ್ಯಾಪಾರ ಕೌಶಲ್ಯಾಧಾರಿತ ಚಟುವಟಿಕೆಗಳಿಗೆ ಸಾಲ ಸೌಲಭ್ಯ ನೀಡಲಾಗುತ್ತಿದೆ. ಆದರೆ ಈ ಬಗ್ಗೆ ಹೆಚ್ಚಿನವರಿಗೆ ಮಾಹಿತಿ ಇಲ್ಲ. ಸ್ಥಳೀಯ ಸಂಸ್ಥೆಗಳು ಹಾಗೂ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿಗಳು ಮನೆ ಮನೆಗೆ ತೆರಳಿ ಮಾಹಿತಿ ಒದಗಿಸಬೇಕು ಎಂದು ಪಿ.ಪಿ ವಾವಾ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಪುನರ್ವಸತಿ ಕಾರ್ಯ ಇನ್ನೂ ಪರಿಣಾಮಕಾರಿಯಾಗಿ ನಡೆಯಬೇಕು. ಪೌರ ಕಾರ್ಮಿಕರಿಗೂ ವಸತಿ ಸೌಲಭ್ಯ, ಕಾಲಕಾಲಕ್ಕೆ ವೈದ್ಯಕೀಯ ಚಿಕಿತ್ಸೆ, ಸುರಕ್ಷತಾ ಸಾಮಗ್ರಿಗಳ ವಿತರಣೆ ಮಾಡಬೇಕು ಎಂದು ತಿಳಿಸಿದರು.

ಬ್ಯಾಂಕ್‌ಗಳು ಯಾವುದೇ ಸುರಕ್ಷತಾ ಭದ್ರತೆ ಕೇಳದೆ ಸಾಲ ಸೌಲಭ್ಯ ನೀಡಬೇಕು. ಕೇಂದ್ರ ಸರ್ಕಾರ ಹೆಚ್ಚಿನ ಅನುದಾನ ಒದಗಿಸಿದ್ದು ಅದು ಸದ್ಬಳಕೆಯಾಗುವಂತೆ ನೋಡಿಕೊಳ್ಳಿ. ಸಫಾಯಿ ಕರ್ಮಚಾರಿಗಳಿಗೆ ಸರಿಯಾಗಿ ಅರಿವು ಮೂಡಿಸಿ, ಎಲ್ಲಾ ಸೌಲಭ್ಯ ಒದಗಿಸಿದರೆ ಅವರು ನಿಮ್ಮನ್ನು ಪೂಜಿಸುತ್ತಾರೆ. ತಮ್ಮ ಆರೋಗ್ಯವನ್ನು ಸವಾಲಿಗೆ ಒಡ್ಡಿಕೊಂಡು ಇಡೀ ಸಮಾಜದ ಹಿತಕ್ಕಾಗಿ ಶ್ರಮಿಸುತ್ತಿರುವ ಸಮುದಾಯದ ಹಿತ ಕಾಯಿರಿ ಎಂದು ಡಾ ಪಿ.ಪಿ ವಾವಾ ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿ ಅರ್ಚನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್. ಪೂರ್ಣಿಮಾ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಬಿ.ಎ ಜಗದೀಶ್, ಆಯೋಗದ ಸದಸ್ಯರ ಆಪ್ತ ಸಹಾಯಕ ಸುಕುಮಾರ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಂಜುನಾಥ್, ಜಿಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಸರಗಿಡದ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net