

ತುಮಕೂರು: ಸಮಾಜದ ಹಿತಕ್ಕಾಗಿ ಶ್ರಮಿಸಿದ ಮಹರ್ಷಿ ವೇಮನ ಅವರಂತಹ ಮಹಾಯೋಗಿಗಳ ಬಗ್ಗೆ ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವಾಗಬೇಕು ಎಂದು ರೆಡ್ಡಿ ಜನಸಂಘದ ಜಿಲ್ಲಾಧ್ಯಕ್ಷ ಕೆ.ಶ್ರೀನಿವಾಸರೆಡ್ಡಿ ಹೇಳಿದರು.
ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ರೆಡ್ಡಿ ಜನ ಸಂಘದ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಹರ್ಷಿ ವೇಮನ ಜಯಂತಿ ಯಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಮಹರ್ಷಿ ವೇಮನ ಅವರ ಕುರಿತಾದ ಕಾರ್ಯಕ್ರಮಗಲ್ಲಿ
ಸಮುದಾಯದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಾಡಬೇಕು ಎಂದರು.
ರೆಡ್ಡಿ ಜನಸಂಘ ಆರಂಭವಾಗಿ ಎಂಟು ವರ್ಷಗಳಾಗಿವೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಒಂದು ಗಂಡು ಮತ್ತು ಹೆಣ್ಣು ಮಕ್ಕಳ ಹಾಸ್ಟೆಲ್ ನಿಮಾರ್ಣವಾಗುತ್ತಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದಲೇ ಕಾರ್ಯಾರಂಭ ಮಾಡಲಿದ್ದು, ಸಮುದಾಯದ ಉಳ್ಳವರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಮಾತುಗಳು ಇನ್ನೊಬ್ಬರಿಂದ ಎರವಲು ಪಡೆದ ಮಾತಗಳಾಗಬಾರದು. ಹೊಸ ಆಲೋಚನೆಗಳನ್ನು ಹುಟ್ಟು ಹಾಕುವಂತಿರಬೇಕು, ವೇಮನ ಅವರು ಆಲೋಚನೆಗಳ ಮೂಲಕ ಜನರಲ್ಲಿ ಬದಲಾವಣೆ ತರ ಬಯಸಿದ್ದರೇ ಹೊರತು, ಉಡುಗೆ ತೊಡುಗೆಗಳಿಂದಲ್ಲ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದರು. ತುಮಕೂರು ವಿವಿ ಸಹಾಯಕ ಪ್ರಾಧ್ಯಾಪಕ ಡಾ.ವೆಂಕಟರೆಡ್ಡಿ ರಾಮರೆಡ್ಡಿ ಅವರು ವೇಮನ ಕುರಿತು ಉಪನ್ಯಾಸ ನೀಡಿದರು. ಸಮುದಾಯದ ಸಾಧಕರಾದ ಡಾ.ಗಿರೀಶ್ ರೆಡ್ಡಿ, ಡಾ.ನರಸರೆಡ್ಡಿ, ಲೋಕೇಶ್ ರೆಡ್ಡಿ, ವೆಂಕಟೇಶ್ ರೆಡ್ಡಿ, ಡಾ.ತೇಜಸ್ವಿನಿ ರೆಡ್ಡಿ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ರೆಡ್ಡಿ ಜನ ಸಂಘದ ಕಾರ್ಯದರ್ಶಿ ರಾಜಗೋಪಾಲ್ ರೆಡ್ಡಿ ಮತ್ತಿತರರು ಇದ್ದರು.
ಮಹಾತ್ಮರ ಬದುಕೇ ಆದರ್ಶ: ಹಿರೇಮಠದ ಡಾ.ಶಿವಾನಂದ ಶಿರ್ವಾಚಾರ್ಯ ಸ್ವಾಮೀಜಿ ಮಾತನಾಡಿ, ಯೋಗಿ ವೇಮನ ಪರಿವರ್ತನೆಗೆ ಒಂದು ತೂಕವಿದೆ, ಪರಿವರ್ತನೆಗೆ ಅವಕಾಶವಿದೆ. ತಿಪ್ಪೆಯಿಂದ ಉಪ್ಪರಿಕೆಗೆ ಬದಲಾವಣೆ ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅತ್ತಿಗೆ ಹೇಮರೆಡ್ಡಿ ಮಲ್ಲಮ್ಮನಿಂದ ದೀಕ್ಷೆ ಪಡೆದು ಬದಲಾಗುವ ಯೋಗಿಯಾದ ವೇಮನ ಅವರು ಆದರ್ಶರಾದರು ಎಂದರು. ತಪ್ಪು ಸಹಜ ಆದರೆ ಅದು ಪುನರಾವರ್ತನೆ ಆಗಬಾರದು ಎಂಬ ಸಂದೇಶ ಇವರ ಜೀವನದಲ್ಲಿದೆ. ಮಹಾತ್ಮರು ಎನ್ನಿಸಿಕೊಂಡಿವವರ ಬದುಕು ಆರಂಭದಲ್ಲಿ ತಪ್ಪುಗಳಿಂದಲೇ ಕೂಡಿವೆ. ಇದಕ್ಕೆ ಬೇಡನಾದ ವಾಲ್ಮೀಕಿ, ಕನಕದಾಸರು, ವೇಮನ ಬದುಕೆ ಸಾಕ್ಷಿ. ತಪ್ಪು ತಿದ್ದಿಕೊಂಡು,
ಪುನರಾವರ್ತಿತ ಆಗದಂತೆ ಬುದುಕುವುದೇ ನಿಜವಾದ ಜೀವನ ಎಂದರು.