ಸಮಾಜದ ಹಿಂದುಳಿದವರಿಗೆ ಸೌಲಭ್ಯ ಸಿಗಲಿ

MIRLE-1
Published on

ಸಾಲಿಗ್ರಾಮ: ಕರ್ನಾಟಕ ರಾಜ್ಯ ಹಿಂದುಳಿದ ಒಕ್ಕಲಿಗರ ಅಭಿವೃದ್ಧಿ ಸಂಘದಿಂದ ರಾಜ್ಯಾದ್ಯಂತ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಒಕ್ಕಲಿಗ ಸಮಾಜದ ಹಿಂದುಳಿದವರು ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಕೃಷ್ಣೇಗೌಡ ಸಲಹೆ ನೀಡಿದರು.
ಮೈಸೂರು ಜಿಲ್ಲೆ ಸಾಲಿಗ್ರಾಮ ತಾಲೂಕಿನ ಮಿರ್ಲೆ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಸಮಾಜದ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.


ಸರ್ಕಾರದಿಂದ ಒಕ್ಕಲಿಗರ ಸಮಾಜದ ಅಭಿವೃದ್ಧಿಗೆ ಬರುತ್ತಿರುವ ಸವಲತ್ತುಗಳು ಒಕ್ಕಲಿಗ ಸಮಾಜದಲ್ಲಿರುವ ಬಡವರಿಗೆ ಸಿಗುವುದಿಲ್ಲ. ಹಾಗಾಗಿ, ಸಮಾಜದಲ್ಲಿರುವ ಬಡವರನ್ನು ಗುರುತಿಸಿ ಸರ್ಕಾರದ ಸೌಲಭ್ಯ ಕೊಡಿಸುವ ಮೂಲಕ ಅಭಿವೃದ್ಧಿಪಡಿಸಲು ರಾಜ್ಯ ಸಂಘ ಕಾರ್ಯ ನಿರ್ವಹಿಸುತ್ತಿದೆ. ಸಮಾಜದವರು ಸರ್ಕಾರದ ಯಾವುದೇ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಿದರೂ ಅದನ್ನು ಸಂಘದ ಗಮನಕ್ಕೆ ತಂದರೆ ಆಯಾ ಭಾಗದ ಜಿಲ್ಲಾ ಅಧ್ಯಕ್ಷರು, ತಾಲೂಕು ಅಧ್ಯಕ್ಷರು ಮತ್ತು ಸಂಘದ ಪದಾಧಿಕಾರಿಗಳು ಸದಸ್ಯರು ಫಲಾನುಭವಿಗಳಿಗೆ ಶೀರ್ಘ್ರವೇ ದೊರಕುವಂತೆ ಶ್ರಮಿಸುತ್ತಾರೆ ಎಂದರು.
ಸಮಾಜದಲ್ಲಿ ಸಾವಿರಾರು ಬಡ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದರೂ ಉನ್ನತ ಶಿಕ್ಷಣ ಪಡೆಯಲಾಗದೆ, ವಿದ್ಯಾಭ್ಯಾಸವನ್ನು ಮೋಟಕುಗೊಳಿಸಿರುವ ಉದಾಹರಣೆಗಳಿವೆ. ಹಾಗಾಗಿ ಅಂತಹ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಸಂಘ ಮತ್ತು ಸಮಾಜದ ದಾನಿಗಳಿಂದ ಹೆಚ್ಚು ಪ್ರೋತ್ಸಾಹ ನೀಡುವ ಮೂಲಕ ಉನ್ನತ ಶಿಕ್ಷಣ ಪಡೆಯಲು ಸಹಕಾರ ನೀಡಲಾಗುವುದು. ಇದನ್ನ್ನು ರಾಜ್ಯದ ಪ್ರತಿ ಜಿಲ್ಲೆ ಮತ್ತು ತಾಲೂಕುಗಳಲ್ಲಿನ ಸಮಾಜದ ಬಂಧುಗಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.


ರಾಜ್ಯ ಸಂಘದ ಪ್ರಚಾರ ಸಮಿತಿ ಅಧ್ಯಕ್ಷ ಮಂಜೇಗೌಡ ಮಾತನಾಡಿ, ರಾಜ್ಯ ಸಂಘಗಳು ಅಭಿವೃದ್ಧಿಯಾಗಲು ಎಲ್ಲರ ಸಹಕಾರ ಅತ್ಯಗತ್ಯ. ಪ್ರತಿಯೊಬ್ಬರೂ ಸಂಘದೊಂದಿಗೆ ಒಡನಾಟ ಇಟ್ಟುಕೊಳ್ಳಬೇಕು. ಆಗ ಮಾತ್ರ ಸಂಘ ಮತ್ತು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಲು ಅನುಕೂಲವಾಗುತ್ತದೆ. ಈಗಾಗಲೇ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಅಧ್ಯಕ್ಷರು ಮತ್ತು ಪದಾಧಿಕಾರಗಳನ್ನು ಆಯ್ಕೆ ಮಾಡಲಾಗಿದ್ದು, ಸಮಜದದವರ ಸಮಸ್ಯೆಗಳಿಗೆ ಅವರು ಸ್ಪಂದಿಸಲಿದ್ದಾರೆ ಎಂದು ತಿಳಿಸಿದರು.

ರಾಜ್ಯ ಸಂಘದ ಪ್ರಚಾರ ಸಮಿತಿ ಅಧ್ಯಕ್ಷ ಮಂಜೇಗೌಡ, ಮೈಸೂರು ಜಿಲ್ಲಾ ಅಧ್ಯಕ್ಷ ಶ್ರುತಿ ಜಗನ್ನಾಥ್, ಹುಣಸೂರು ತಾಲೂಕು ಅಧ್ಯಕ್ಷೆ ಕೆ.ರವಿ.ಅರ್ಪಿತಾ, ಹಾಲೂರು ತಾಲೂಕು ಅಧ್ಯಕ್ಷ ಅಣ್ಣೇಗೌಡ, ಕೆ.ಆರ್.ನಗರ ತಾಲೂಕು ಅಧ್ಯಕ್ಷೆ ಭಾರತಿ, ಮೈಸೂರು ಜಿಲ್ಲಾ ಕಾಂಗ್ರೆಸ್ ಹಿರಿಯ ಕಾರ್ಯದರ್ಶಿ ನಂದೀಶ್, ಮಿರ್ಲೆ ಗ್ರಾ.ಪಂ. ಅಧ್ಯಕ್ಷ ಬಾಲು, ಮಾಜಿ ಉಪಾಧ್ಯಕ್ಷ ರಾಮಸ್ವಾಮಿಗೌಡ, ಗ್ರಾಮದ ಮುಖಂಡ ನಾಗೇಶ್ ಸೇರಿದಂತೆ ಒಕ್ಕಲಿಗ ಸಮಾಜದ ಮುಖಂಡರು,ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net