ಸಮಾಜದ ಸಮಸ್ಯೆಗಳಿಗೆ ಇತಿಹಾಸದಲ್ಲಿದೆ ಪರಿಹಾರ

CTD SANASKRA BARATII......
Published on

ಚಿತ್ರದುರ್ಗ: ಪ್ರಸ್ತತ ಸಮಾಜ ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಹಿರಿಯರು ಸೂಚಿಸಿರುವ ಪರಿಹಾರವನ್ನು ಚರಿತ್ರೆಯಲ್ಲಿ ಕಾಣ ಬಹುದಾಗಿದೆ ಎಂದು ಹಂಪಿ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಹೇಳಿದರು.
ಸಂಸ್ಕಾರ ಭಾರತೀ ಚಿತ್ರದುರ್ಗ ಜಿಲ್ಲಾ ಸಮಿತಿ ನಗರದ ಶಿಕ್ಷಕರ ಸರ್ಕಾರಿ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಕರ್ನಾಟಕದ ಮೊದಲ ಸಾಮ್ರಾಜ್ಯ ಸ್ಥಾಪಕ ಮಯೂರವರ್ಮ ಮತ್ತು ಚಿತ್ರದುರ್ಗ’ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಸಮಸ್ಯೆಗಳಿಗೆ ಚರಿತ್ರೆಯಲ್ಲಿ ಹಿರಿಯರು ಸೂಚಿಸಿರುವ ಪರಿಹಾರಗಳನ್ನು ನೋಡುವ ತಾಳ್ಮೆ, ಸಹನೆ ನಮ್ಮಲ್ಲಿ ಇಲ್ಲವಾಗಿದೆ. ಜಾಗತಿಕ ವಿದ್ಯಮಾನದಲ್ಲಿ ಸ್ಥಳೀಯ ಇತಿಹಾಸದ ಅಧ್ಯಯನ ಮೂಲಕ ಕುಸಿಯುತ್ತಿರುವ ಆತ್ಮವಿಶ್ವಾಸವನ್ನು ವೃದ್ಧಿಸಿಕೊಳ್ಳುವ ಕೆಲಸವಾಗಬೇಕಿದೆ. ಇತಿಹಾಸ ನಮ್ಮ ಸಂಸ್ಕೃತಿಯ ಪ್ರತಿಬಿಂಬ. ಭಾರತದಲ್ಲಿ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಚರಿತ್ರೆಯ ಆಕರಗಳಿದ್ದರೂ, ಸ್ಥಳೀಯ ಚರಿತ್ರೆಗೆ ಸೂಕ್ತ ನ್ಯಾಯ ದೊರಕಿಲ್ಲ. ಯುವ ಜನರ ಇವತ್ತಿನ ಆದರ್ಶಗಳನ್ನು ಗಮನಿಸಿದರೆ ನಿರಾಸೆ ಮೂಡುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಕಾರ ಭಾರತಿ ಜಿಲ್ಲಾಧ್ಯಕ್ಷೆ ಪಿ.ಸುಜಾತಾ ಲಿಂಗಾರೆಡ್ಡಿ ಮಾತನಾಡಿ, ಭವಿಷ್ಯದ ಭದ್ರ ಬುನಾದಿಗೆ ಇತಿಹಾಸದ ಅರಿವು ಅಗತ್ಯ. ಹಿರಿಯರ ತ್ಯಾಗ, ಬಲಿದಾನವನ್ನು ಮನಗಾಣಬೇಕಿದೆ. ಮನುಷ್ಯರಾಗಿ ಜನ್ಮ ತಾಳಿದ ಮೇಲೆ ಏನಾದರೂ ಒಂದು ಸಾಧನೆ ಮಾಡಬೇಕು ಎಂದರು.
ಇತಿಹಾಸ ಸಂಶೋಧಕ ಡಾ.ಬಿ. ರಾಜಶೇಖರಪ್ಪ, ಡಾ. ಬಿ. ಯಶೋದಾ ರಾಜಶೇಖರಪ್ಪ, ತುಮಕೂರು ವಿವಿ ಕಲಾನಿಕಾಯದ ಡೀನ್ ಡಾ. ಎಂ. ಕೊಟ್ರೇಶ್ ವಿಚಾರ ಮಂಡಿಸಿದರು.
ಮಹಾವಿದ್ಯಾಲಯದ ಸಹಾಯಕ ನಿರ್ದೇಶಕಿ ಲೀಲಾವತಿ ಮಾತನಾಡಿದರು. ದಕ್ಷಿಣ ಪ್ರಾಂತ ಮಾಜಿ ಪ್ರಧಾನ ಕಾರ‌್ಯದರ್ಶಿ ಡಾ.ರಾಜೀವಲೋಚನ, ಶಿವಮೊಗ್ಗ ವಿಭಾಗ ಕಾರ‌್ಯದರ್ಶಿ ಮಾರುತಿ ಮೋಹನ್, ಜಿಲ್ಲಾ ಸಂಘಟನಾ ಕಾರ‌್ಯದರ್ಶಿ ಉಮೇಶ್ ತುಪ್ಪದ್, ರಾಮಚಂದ್ರ, ಹೇಮಂತರಾವ್, ಹಿರಿಯೂರು ಬಿಇಒ ತಿಪ್ಪೇಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net