ಸಮಾಜದ ಶಾಂತಿಗಾಗಿ ಶಿಕ್ಷಣ ಅತ್ಯಗತ್ಯ -ವಿಶ್ರಾಂತ ನ್ಯಾಯಮೂರ್ತಿ ಎಚ್.ಬಿಲ್ಲಪ್ಪ

IMG-20230627-WA0058.jpg
Published on

ದಾವಣಗೆರೆ: ಸಮಾಜದಲ್ಲಿ ಶಾಂತಿ ಸ್ಥಾಪಿಸಲು ಹಾಗೂ ಜೀವನದಲ್ಲಿ ಶಿಸ್ತು ಕಾಪಾಡಲು ಶಿಕ್ಷಣ ಅತ್ಯಗತ್ಯ ಎಂದು ಕರ್ನಾಟಕ ಹೈಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿ ಎಚ್.ಬಿಲ್ಲಪ್ಪ ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್ನೆಸ್ಸೆಸ್, ಎನ್‌ಸಿಸಿ ಚಟುವಟಿಕೆಗಳ ಸಮಾರೋಪದಲ್ಲಿ ಮಾತನಾಡಿದರು.

ಶಿಕ್ಷಣದಲ್ಲಿ ನೈತಿಕ ಮೌಲ್ಯಗಳಿವೆ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ವಿದ್ಯೆ ಕದಿಯಲಾಗದ, ಎಷ್ಟೇ ಕೊಟ್ಟರೂ ಹೆಚ್ಚುವ ಸಂಪತ್ತು ಎಂಬುದಾಗಿ ಸರ್ವಜ್ಞ ಹೇಳಿದ್ದಾರೆ. ಶಿಕ್ಷಣದ ಬಲದಿಂದ ಒಂದು ದೇಶವನ್ನೇ ಬದಲಿಸಬಹುದು ಎಂದರು.

ಜೀವನವೆಂಬುದು ನಾಟಕ ರಂಗ. ಇಲ್ಲಿ ಆಡುವ ಪಾತ್ರಗಳಿಗೆ ಕೊನೆ ಇಲ್ಲ. ಸಂತಸದ ದುಕು ಕಾಣಲು ಮಾನವ ಹಲವು ತಯಾರಿ ನಡೆಸುತ್ತಾನೆ. ಇಂದಿನ ದಿನಮಾನದಲ್ಲಿ ಮನುಷ್ಯರು ಮನುಷ್ಯರಂತೆ ಕಾಣುತ್ತಿಲ್ಲ. ಹೆಚ್ಚಿದ ಜಾತಿ-ಲಿಂಗ ತಾರತಮ್ಯದಿಂದಾಗಿ ಸಾಮಾಜಿಕ ನ್ಯಾಯ ಸಿಗುತ್ತಿಲ್ಲ. ನಮ್ಮಲ್ಲಿ ಸಮಾನತೆ ಮರೆಯಾಗಿದೆ ಎಂದು ವಿಷಾದಿಸಿದರು.

ಜೀವನದ ಶಿಕ್ಷಣಕ್ಕೆ ಶಾಲಾ ಕಾಲೇಜು ಹಂತದಲ್ಲಿ ಎನ್‌ಸಿಸಿ, ಎನ್ನೆಸ್ಸೆಸ್ ಚಟುವಟಿಕೆಗಳು ಸೇರಿ ಅನೇಕ ಮಾರ್ಗದರ್ಶನಗಳಿವೆ. ಶಿಕ್ಷಣ ಕಲಿತವ ನಿಸ್ವಾರ್ಥಿಯಾದರೆ ಕಲಿಯದವ ಸ್ವಾರ್ಥಿಯಾಗಿರುತ್ತಾನೆ ಎಂದು ಹೇಳಿದರು.

ಕಾಲೇಜು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕ್ರೀಡಾ ಹಾಸ್ಟೆಲ್ ಅಗತ್ಯವಿದೆ. ಸರ್ಕಾರದಿಂದ ಮಂಜೂರಾದ ಮೂರು ಎಕರೆ ಜಮೀನು ಹದ್ದುಬಸ್ತು ಮಾಡಿಕೊಡುವಂತೆ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ರಾಮ್‌ಪ್ರಸಾದ್ ಕೋರಿದರು.

ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾಲೇಜಿನ ಪ್ರಾಚಾರ್ಯ ಪ್ರೊ.ಎಸ್.ಆರ್. ಆಂಜಿನಪ್ಪ, ಸಂಜೆ ಕಾಲೇಜಿನ ಪ್ರಾಚಾರ್ಯ ಡಾ.ಸಿ.ಕೆ.ಕೊಟ್ರಪ್ಪ, ಐಕ್ಯೂಎಸಿ ಸಂಚಾಲಕ ಡಾ. ಕೆ.ನಾರಾಯಣಸ್ವಾಮಿ, ಪತ್ರಾಂಕಿತ ವ್ಯವಸ್ಥಾಪಕಿ ಟಿ.ಗೀತಾದೇವಿ,ದೈಹಿಕ ಶಿಕ್ಷಣ ನಿರ್ದೇಶಕಿ ಡಾ.ಎಂ.ಆರ್. ರೇಖಾ, ಡಾ.ಜಿ.ಸಿ ಸದಾಶಿವಪ್ಪ, ಎಂ.ಬಿ.ರೇಣುಕಾ ಇತರರಿದ್ದರು. ಪ್ರಾಧ್ಯಾಪಕ ಪ್ರೊ.ಭೀಮಣ್ಣ ಬಿ. ಸುಣಗಾರ್ ಸ್ವಾಗತಿಸಿದರು. ಕೆ.ಬಿ. ಸುನೀತಾ ವಂದಿಸಿದರು. ಎಂ. ರಾಜಕುಮಾರ್ ಕಾರ್ಯಕ್ರಮ ನಿರೂಪಿಸಿದರು.

--

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net