

ಚಿತ್ರದುರ್ಗ: ಉತ್ತಮ ರಾಜ್ಯ, ರಾಷ್ಟ್ರ ನಿರ್ಮಾಣಕ್ಕೆ ಹಾಗೂ ಸಮಾಜದ ಶಾಂತಿ, ನೆಮ್ಮದಿ ಕಾಪಾಡಲು ಪೊಲೀಸ್ ಸೇವೆ ಅತ್ಯವಶ್ಯಕ ಎಂದು ನಿವೃತ್ತ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಎಚ್.ಆರ್. ಜ್ಞಾನಮೂರ್ತಿ ಹೇಳಿದರು.
ಜಿಲ್ಲಾ ಪೊಲೀಸ್, ನಗರದ ಡಿಎಆರ್ ಮೈದಾನದಲ್ಲಿ ಬುಧವಾರ ಏರ್ಪಡಿಸಿದ್ದ ರಾಜ್ಯ ಪೊಲೀಸ್ ಧ್ವಜ ಹಾಗೂ ಕಲ್ಯಾಣ ದಿನಾಚರಣೆಯಲ್ಲಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.
ಪೊಲೀಸ್ ಇಲಾಖೆ ಇತರೆ ಇಲಾಖೆಗಳಂತಲ್ಲ, ಸಮಾಜದ ಶಾಂತಿ ಕಾಪಾಡುವ ಹೊಣೆ ಈ ಇಲಾಖೆ ಮೇಲಿದೆ. ದುರ್ಬಲರಿಗೆ ನ್ಯಾಯ ಕೊಡಿಸಲು ಶ್ರದ್ಧೆ ಮತ್ತು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕಿದೆ. ಸಮಾಜ ವಿ ರೋಧಿ ಚಟುವಟಿಕೆಗಳನ್ನು ಮಟ್ಟ ಹಾಕುವಲ್ಲಿ ಇಲಾಖೆ ಕಾರ್ಯ ಮಹತ್ವದ್ದಾಗಿದೆ ಎಂದರು.
ಆರೋಗ್ಯಭಾಗ್ಯದಿಂದ ಪೊಲೀಸರು ಮತ್ತು ಕುಟುಂಬ ಸದಸ್ಯರಿಗೆ ಅನುಕೂಲವಾಗಿದೆ. ನಿವೃತ್ತರಾಗುವ ಅಧಿಕಾರಿ, ಸಿಬ್ಬಂದಿಗೆ ಎಸ್‌ಪಿ ಕಚೇರಿಯಲ್ಲಿ ಅವರ ಕರ್ತವ್ಯದ ಕೊನೇ ದಿನದಂದೇ ಬೀಳ್ಕೊಡುಗೆ ಕಾರ್ಯಕ್ರಮ ಏರ್ಪಡಿಸುತ್ತಿರುವುದು ಸಂತೋಷದ ವಿಷಯ ಎಂದರು.
ಎಡಿಸಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಜನರ ನೆಮ್ಮದಿಗೆ ಕಾರಣರಾಗಿರುವ ಪೊಲೀಸರು ಈ ನಾಡಿನ ಆಸ್ತಿ ಎಂದು ಹೇಳಿದರು.
ನಾವಿಂದು ಶಾಂತಿ, ನೆಮ್ಮದಿಯಿಂದ ಇದ್ದೇವೆ, ನಿತ್ಯ ನೆಮ್ಮದಿಯಿಂದ ನಿದ್ರೆ ಮಾಡುತ್ತಿದ್ದೇವೆ ಎಂದರೆ ಅದರ ಹಿಂದೆ ಪೊಲೀಸರ ಶ್ರಮ ವಿರುತ್ತದೆ. ಹಬ್ಬ ಹರಿದಿನಗಳಲ್ಲಿ ಪೊಲೀಸರು ತಮ್ಮ ಸುಖ, ಸಂತೋಷಗಳನ್ನು ಬದಿಗಿರಿಸಿ ಬಂದೋಬಸ್ತ್‌ನಲ್ಲಿ ನಿರತರಾಗಿರುತ್ತಾರೆ ಎಂದರು.
ಪೊಲೀಸರು ಅವರ ಕುಟುಂಬಕ್ಕಷ್ಟೇ ಅಲ್ಲ, ನಾಡಿಗೇ ಆಸ್ತಿಯಾಗಿದ್ದಾರೆ. ತಮ್ಮ ಆರೋಗ್ಯದೆಡೆ ಪೊಲೀಸರು ಗಮನ ಹರಿಸಬೇಕು. ಯೋಗ, ವ್ಯಾಯಾಮಗಳಂಥ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಈಗ ಸೈಬರ್ ಅಪರಾಧಗಳು ಹೆಚ್ಚುತ್ತಿವೆ. ಜಾಣ್ಮೆ ಮತ್ತು ತಂತ್ರಜ್ಞಾನದೊಂದಿಗೆ ಸೈಬರ್ ವಂಚನೆ ಭೇದಿಸುವ ಕೌಶಲ ಕಲಿಯಬೇಕು. ಅದಕ್ಕೂ ಮೊದಲು ಜನರಲ್ಲಿ ಸೂಕ್ತ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ವಾರ್ಷಿಕ ವರದಿ ವಾಚಿಸಿದ ಎಸ್‌ಪಿ ರಂಜಿತ್‌ಕುಮಾರ್‌ಬಂಡಾರು, ನಗರದಲ್ಲಿರುವ ಪೊಲೀಸ್ ಸಮುದಾಯ, ಕ್ರೀಡಾ, ಸಾಂಸ್ಕೃತಿಕ ಭವನವನ್ನು ಶೀಘ್ರ ದುರಸ್ತಿಗೊಳಿಸುವುದಾಗಿ ಹೇಳಿದರು.
ಪೊಲೀಸರು ಮತ್ತು ಕುಟುಂಬ ವರ್ಗದವರ ಕಲ್ಯಾಣಕ್ಕೆಂದು ಅನುಷ್ಠಾನಗೊಂಡಿರುವ ವಿವಿಧ ಕಾರ್ಯಕ್ರಮಗಳನ್ನು ವಿವರಿಸಿದರು.
ಕಾರ್ಯಕ್ರಮದ ಅಂಗವಾಗಿ ಪರೇಡ್ ಕಮಾಂಡರ್ ಆರ್‌ಪಿಐ ಶಿವರಾಜ್ ನೇತೃತ್ವದಲ್ಲಿ ಆಕರ್ಷಕ ಪಥ ಸಂಚಲನ ನಡೆಯಿತು.
ಜಿಲ್ಲಾ ಕಾರಾಗೃಹ ಅಧೀಕ್ಷಕ ಸಿದ್ದರಾಮ ಬಿ. ಪಾಟೀಲ್,ನಿವೃತ್ತ ಪೊಲೀಸ್ ನೌಕರರ ಸಂಘದ ಅಧ್ಯಕ್ಷ ಭೀಮಾರೆಡ್ಡಿ ಮತ್ತಿತರರು ಇದ್ದರು. ಚಿತ್ರದುರ್ಗ ಡಿವೈಎಸ್‌ಪಿ ಪಿ.ಕೆ.ದಿನಕರ್ ಸ್ವಾಗತಿಸಿ, ಚಳ್ಳಕೆರೆ ಡಿವೈಎಸ್‌ಪಿ ರಾಜಣ್ಣ ವಂದಿಸಿದರು.
ನಿವೃತ್ತರಿಗೆ ಸನ್ಮಾನ
ಕಳೆದ ಏಪ್ರಿಲ್ 1ರಿಂದ 2025ರ ಮಾರ್ಚ್ 31ರವರೆಗೆ ನಿವೃತ್ತಿ ಹೊಂದಿದ ಪೊಲೀಸ್ ಅಧಿಕಾರಿ, ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ನಿವೃತ್ತ ಎಎಸ್‌ಐಗಳಾದ ಧರಣೇಶಪ್ಪ, ಸಿ.ಅಜ್ಜಣ್ಣ, ಟಿ. ಉಮಾಶಂಕರ್, ಸಣ್ಣಬೋರಯ್ಯ, ಪಿ. ಮಂಜುನಾಥ, ಟಿ. ಕೃಷ್ಣಮೂರ್ತಿ, ಎನ್. ತಿಪ್ಪೇಸ್ವಾಮಿ, ಕೆ.ಬಿ. ಮಂಜುನಾಥ್, ರುದ್ರಪ್ಪ, ಎಚ್. ಗಣಪತಿ, ಟಿ. ರೇವಣಸಿದ್ಪಪ್ಪ, ಎನ್. ಪ್ರಕಾಶ್, ಎಸ್.ಡಿ. ವಸಂತ್‌ಕುಮಾರ್, ರಾಮಚಂದ್ರರೆಡ್ಡಿ, ಎಆರ್‌ಎಸ್‌ಐ ಪಿ. ಕಾಟಯ್ಯ, ಡಿ. ಮಂಜುನಾಥ, ಪಿಎಸ್‌ಐಗಳಾದ ಕೆ.ಪ್ರಾಣೇಶ್, ಎಲ್.ಆರ್. ಸಂಜಯ್, ಸಿಎಚ್‌ಸಿ ಎಂ.ಕೆ. ವೆಂಕಟೇಶ್‌ರೆಡ್ಡಿ, ಸಿಪಿಸಿಗಳಾದ ಈಶ್ವರಪ್ಪ, ಬಿ. ಬಸವರಾಜು, ಪಿಎಸ್‌ಐ ಎಚ್.ಆರ್. ಜ್ಞಾನಮೂರ್ತಿ ಸೇರಿ 22 ಮಂದಿಯನ್ನು ಗೌರವಿಸಲಾಯಿತು.
-----