

ಹುಣಸೂರು: ದೇಶದ ಶೋಷಿತರ ಪರವಾಗಿ ದನಿಯೆತ್ತಿ, ಸತತ ನಾಲ್ಕು ದಶಕಗಳ ಕಾಲ ತಮ್ಮ ಕವಿತೆ ಮತ್ತು ಭಾಷಣದ ಮೂಲಕ ಜನಜಾಗೃತಿ ಮೂಡಿಸಿದ್ದ ಹೋರಾಟಗಾರ ಗದ್ದರ್ ಸಮಾಜದ ಶಕ್ತಿಯಾಗಿದ್ದರು ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಂಗರಾಜ ಮಲ್ಲಾಡಿ ಹೇಳಿದರು.
ಕ್ರಾಂತಿಕಾರಿ ಕವಿ ಮತ್ತು ಹೋರಾಟಗಾರ ಗದ್ದರ್ ಸ್ಮರಣಾರ್ಥ ನಗರದ ಅಂಬೇಡ್ಕರ್ ಭವನದ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, 40 ವರ್ಷಗಳ ಕಾಲ ಹೋರಾಟ ಮಾಡಿ ಸಾವಿರಾರು ಭೂ ರಹಿತ ಕೃಷಿಕಾರ್ಮಿಕರಿಗೆ ಭೂಮಿ ಹಕ್ಕನ್ನು ಕೊಡಿಸಲು ಕಾರಣರಾದರು. ಸಮಾಜದಲ್ಲಿದ್ದ ಅನಿಷ್ಟ ಪದ್ಧತಿಗಳ ವಿರುದ್ಧ ನಿರಂತರ ಜಾಗೃತಿ ಮೂಡಿಸಿದ್ದರು. ಗದ್ದರ್ ಹೋರಾಟದ ಜತೆಗೆ ಕ್ರಾಂತಿಕಾರಿ ಕವಿಗಳಾಗಿ ಸಮಾಜದಲ್ಲಿ ನಡೆಯುತ್ತಿದ್ದ ಶೋಷಣೆ, ಅನ್ಯಾಯ, ದಬ್ಬಾಳಿಕೆ ವಿರುದ್ಧ ಜಾನಪದ ಹಾಡುಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರು. ಎಂದಿಗೂ ಸಿದ್ಧಾಂತದ ವಿರುದ್ಧ ರಾಜಿ ಮಾಡಿಕೊಂಡಿರಲಿಲ್ಲ. ಗದ್ದರ್ ಅವರು ಒಂದು ವ್ಯಕ್ತಿಯಾಗದೆ ಸಮಾಜದ ಶಕ್ತಿಯಾಗಿದ್ದರು. ಜನಮೆಚ್ಚಿದ ಹೋರಾಟಗಾರಾಗಿದ್ದ ಗದ್ದರ್ ಅವರು ನಿಧನರಾಗಿರುವುದು ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.
ದಲಿತ ಮುಖಂಡರಾದ ದೇವೇಂದ್ರ ಕುಳುವಾಡಿ, ಬಲ್ಲೇನಹಳ್ಳಿ ಕೆಂಪರಾಜು, ಕಿರಿಜಾಜಿ ಗಜೇಂದ್ರ, ಖಾಲೀದ್ ಗುರುಪುರ, ಧರ್ಮ, ಇಂದ್ರ, ಚಂದ್ರಮ್ಮ, ಸರೋಜಮ್ಮ, ನರಸಮ್ಮ, ರಾಧಾ, ನೇತ್ರಾ, ಅಲೆಮಾರಿ ಜಿಲ್ಲಾ ಸಮಿತಿ ಸದಸ್ಯೆ ಲಕ್ಷ್ಮೀ ಇತರರು ಹಾಜರಿದ್ದರು.