ಸಮಾಜದ ಮುಖ್ಯವಾಹಿನಿಗೆ ಲಿಂಗತ್ವ ಅಲ್ಪಸಂಖ್ಯಾತರ ಸೇರ್ಪಡೆ

ctd adc 1
Published on

ಚಿತ್ರದುರ್ಗ: ಪ್ರತಿಯೊಬ್ಬರೂ ಗೌರವ ಹಾಗೂ ಸ್ವಾಭಿಮಾನದಿಂದ ಬದುಕುವ ಹಕ್ಕನ್ನು ಸಂವಿಧಾನ ನೀಡಿದೆ. ಲಿಂಗತ್ವ ಅಲ್ಪಸಂಖ್ಯಾತರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಅಗತ್ಯ ಕ್ರಮವಹಿಸಬೇಕೆಂದು ಎಡಿಸಿ ಬಿ.ಟಿ. ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.

ಡಿಸಿ ಕಚೇರಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ ಜಿಲ್ಲಾ ಮಟ್ಟದ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿ, ಗುರುತಿನ ಚೀಟಿ, ಆಧಾರ್, ರೇಷನ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಇಲ್ಲದಿದ್ದರೆ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಲಿಂಗತ್ವ ಅಲ್ಪಸಂಖ್ಯಾತರಿಗೆ ಸಾಧ್ಯವಾಗುವುದಿಲ್ಲ. ಆದ್ದರಿಂದ ವಿಶೇಷ ಪ್ರಕರಣವೆಂದು ಪರಿಗಣಿಸಿ, ಮೇಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಬೇಕು. ಸಮಸ್ಯೆಗಳನ್ನು ಅಧಿಕಾರಿಗಳು ಅರ್ಥಮಾಡಿಕೊಂಡು ಸ್ಪಂದಿಸಬೇಕು. ಗುರುತಿನ ಚೀಟಿ, ಆಧಾರ್ ಹಾಗೂ ರೇಷನ್ ಕಾರ್ಡ್‌ಗಳಲ್ಲಿ ಅಗತ್ಯ ತಿದ್ದುಪಡಿ ಮಾಡಿಕೊಡ ಬೇಕು. ಕುಂದು ಕೊರತೆಗಳನ್ನು ಆಲಿಸಲು ಜಿಲ್ಲಾ, ತಾಲೂಕು ಮಟ್ಟದಲ್ಲಿ ತ್ರೈಮಾಸಿಕ ಸಭೆಗಳನ್ನು ಆಯೋಜಿಸಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯ್‌ಕುಮಾರ್ ಮಾತನಾಡಿ, ಚಿತ್ರದುರ್ಗ ತಾಲೂಕಿನಲ್ಲಿ 53, ಚಳ್ಳಕೆರೆ 16, ಹೊಳಲ್ಕೆರೆ 1, ಹೊಸದುರ್ಗ 3, ಹಿರಿಯೂರು 42, ಮೊಳಕಾಲ್ಮೂರು 35 ಸೇರಿ ಜಿಲ್ಲೆಯಲ್ಲಿ 150 ಲಿಂಗತ್ವ ಅಲ್ಪಸಂಖ್ಯಾತರಿದ್ದಾರೆ. 78 ಗುರುತಿನ ಚೀಟಿ ವಿತರಿಸಲಾಗಿದೆ. 28 ಜನರು ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳಾಗಿದ್ದಾರೆ. 139 ಲಿಂಗತ್ವ ಅಲ್ಪಸಂಖ್ಯಾತರು ಆದಾಯೋತ್ಪನ್ನಕರ ಚಟುವಟಿಕೆ ಸೌಲಭ್ಯ ಪಡೆದಿದ್ದಾರೆ. ಲಿಂಗತ್ವ ಅಲ್ಪಸಂಖ್ಯಾತರ ನಿಖರ ಮಾಹಿತಿ ಸಂಗ್ರಹಿಸಲು ಶೀಘ್ರ ಸರ್ವೇ ನಡೆಸಲಾಗುವುದು ಎಂದರು.

ನಿವೇಶನ ಹಾಗೂ ವಸತಿ ಸೌಲಭ್ಯ ಪಡೆಯಲು ದಾಖಲಾತಿಗಳು ಕಡ್ಡಾಯವಾಗಿ ಬೇಕಾಗಿದೆ ಎಂದು ಲಿಂಗತ್ವ ಅಲ್ಪಸಂಖ್ಯಾತರ ಪ್ರತಿನಿಧಿ ಮಲ್ಲು ಹೇಳಿದರು. ಇಲಾಖೆವಾರು ಟ್ರಾನ್ಸ್‌ಜೆಂಡರ್ ಪಾಲಿಸಿ ಅನುಷ್ಠಾನಕ್ಕೆ ಅಧಿಕಾರಿಗಳು ಕ್ರಮವಹಿಸಬೇಕು. ಜಿಲ್ಲೆಯ ಪ್ರತಿ ಪೊಲೀಸ್ ಠಾಣೆಯಲ್ಲಿ ನೋಡಲ್ ಅಧಿಕಾರಿಗಳ ನೇಮಕವಾಗಿದ್ದು, ಓರಿಯಂಟೇಷನ್ ಕಾರ‌್ಯಕ್ರಮಗಳಾಗಬೇಕು ಎಂದರು.

ಎಸಿ ಮೆಹಬೂಬ್ ಜಿಲಾನಿ ಖುರೇಷಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಆಹಾರ ಇಲಾಖೆ ಜಂಟಿ ನಿರ್ದೇಶಕ ಸಿದ್ದರಾಮಪ್ಪ, ಆರೋಗ್ಯ ಇಲಾಖೆ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ. ಸುಧಾ ಮತ್ತಿತರರು ಇದ್ದರು.

--

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net