ಸಮಾಜದ ಪ್ರಗತಿಗೆ ಶಿಕ್ಷಣ ಅಗತ್ಯ

Oplus_16908290
ಹುಡಗಿ ಗ್ರಾಮದಲ್ಲಿ ಬುಧವಾರ ಅಲೆಮಾರಿ ಸುಡಗಾಡ ಸಿದ್ದರ ಸಮಾಜ ಬುಧವಾರ ಆಯೋಜಿಸಿದ್ದ ಬೃಹತ್ ಸಮಾವೇಶವನ್ನು ಮಾಜಿ ಸಚಿವ ರಾಜಶೇಖರ ಪಾಟೀಲ್ ಉದ್ಘಾಟಿಸಿದರು. ಶ್ರೀ ವಿರೂಪಾಕ್ಷ ಶಿವಾಚಾರ್ಯರು, ಸಮಾಜದ ಜಿಲ್ಲಾಧ್ಯಕ್ಷ ಹಣಮಂತ ಕಡಮಂಚಿ, ಕಂಟೆಪ್ಪ ದಾನಾ, ಎಂ.ಡಿ. ಸಿದ್ದಿಕ್‌ಶಾ, ಪ್ರಭು ಮಾಳನಾಯಕ, ಅಣ್ಣಾರಾವ ಪಾಟೀಲ್, ಶಿವಾನಂದ ಕಟ್ಟಿ, ಸುರೇಶ ಘಾಂಗ್ರೆ, ಪ್ರದೀಪ ಪಸರ್ಗಿ ಇತರರಿದ್ದರು.
Published on

ಹುಮನಾಬಾದ್: ರಾಜಕೀಯ, ಶೈಕ್ಷಣಿಕ ಸೇರಿ ನಾನಾ ಸೌಕರ್ಯವಂಚಿತ ಕ್ಷೇತ್ರಗಳಲ್ಲಿ ಹಿಂದುಳಿದ ಸಮಾಜಗಳ ಸಮಗ್ರ ಅಭಿವೃದ್ಧಿಗೆ ಗುಣಮಟ್ಟದ ಶಿಕ್ಷಣದೊಂದಿಗೆ ಸಂಘಟಿತರಾಗುವ ಅಗತ್ಯವಿದೆ ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ್ ಹೇಳಿದರು.

ಹುಡಗಿ ಗ್ರಾಮದ ನಿಸರ್ಗ ಕಲ್ಯಾಣ ಮಂಟಪದಲ್ಲಿ ಬುಧವಾರ ಅಲೆಮಾರಿ ಸುಡಗಾಡ ಸಿದ್ದರ ಸಮಾಜ ಆಯೋಜಿಸಿದ್ದ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಅಲೆಮಾರಿ ಸುಡಗಾಡ ಸಿದ್ದರ ಸಮಾಜದಲ್ಲಿ ಶಿಕ್ಷಣ ವಂಚಿತರು ಸುಮ್ಮನಿರದೆ ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಜತೆಗೆ ಉತ್ತಮ ಸಂಸ್ಕಾರ ನೀಡಬೇಕು. ಮಕ್ಕಳು ಸಹ ಪಾಲಕರ ನಿರೀಕ್ಷೆಯಂತೆ ಸರಿಯಾಗಿ ಅಭ್ಯಸಿಸುವ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಕಾಲಕ್ಕನುಗುಣ ಸಮಾಜದ ಜನರು ಬದಲಾಗುವುದರ ಜತೆಗೆ ಕಾಯಕಕ್ಕಾಗಿ ಬೇರೆ ಬೇರೆ ಕಡೆ ಅಲೆದಾಡಿದರೂ ಮಕ್ಕಳಿಗೆ ಒಂದೇ ಕಡೆ ಕಡ್ಡಾಯ ಶಿಕ್ಷಣ ಕೊಡಿಸಬೇಕು. ಸಂಘಟಿತರಾಗುವ ಮೂಲಕ ಹಕ್ಕು ಪಡೆಯಲು ಮುಂದಾಗಬೇಕು ಎಂದು ಕರೆ ನೀಡಿದರು.

ಸಮಾಜದ ಜಿಲ್ಲಾಧ್ಯಕ್ಷ ಹಣಮಂತ ಕಡಮಂಚಿ ಮಾತನಾಡಿ, ಅಲೆಮಾರಿಗಳ ಒಳಿತಿಗಾಗಿ ಮಾಜಿ ಸಚಿವ ದಿ. ಬಸವರಾಜ ಪಾಟೀಲ್ ಸೇರಿ ಪಾಟೀಲ್ ಪರಿವಾರ ಸದಸ್ಯರು ಬಹಳಷ್ಟು ಸಹಕಾರ ನೀಡಿದ್ದಾರೆ. ಅದರಂತೆ ಈಗಲೂ ರಾಜಶೇಖರ ಪಾಟೀಲ್ ಹೆಚ್ಚಿನ ಒತ್ತು ನೀಡುವ ಮೂಲಕ ಸಮಾಜಕ್ಕೆ ಸರ್ಕಾರದ ಎಲ್ಲ ಸೌಲಭ್ಯ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.

ಯುವ ಮುಖಂಡ ಕೃಷ್ಣಪ್ಪ ಮಾತನಾಡಿ, ಅಲೆಮಾರಿ ಸಮಾಜದ ಬೆಳವಣಿಗೆ ಹಾಗೂ ಸರ್ಕಾರದ ವಿವಿಧ ಯೋಜನೆಗಳಡಿ ಸೌಲಭ್ಯ ಪಡೆಯಲು ಜಾತಿ ಪ್ರಮಾಣಪತ್ರದ ಅಗತ್ಯವಿದ್ದು, ಸುಮಾರು ವರ್ಷಗಳಿಂದ ತಹಸಿಲ್​ಗೆ ಅಲೆದಾಡುತ್ತಿದ್ದರೂ ಸರ್ಟಿಫಿಕೇಟ್ ಕೊಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಮಾಜಿ ಸಚಿವ ರಾಜಶೇಖರ ಪಾಟೀಲ್ ಸರ್ಕಾರದ ಮೇಲೆ ಒತ್ತಡ ಹೇರಿ ಅಲೆಮಾರಿಗಳಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಕೋರಿದರು.

ಸಾನ್ನಿಧ್ಯ ವಹಿಸಿದ್ದ ಹುಡಗಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ವಿರೂಪಾಕ್ಷ ಶಿವಾಚಾರ್ಯರು ಮಾತನಾಡಿ, ಸರ್ಕಾರದ ಸೌಲಭ್ಯ ಪಡೆಯಲು ಸಂಘಟಿತರಾಗಬೇಕು ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ.ಡಿ. ಸಿದ್ದಿಕ್‌ಶಾ, ಪ್ರಮುಖರಾದ ಕಂಟೆಪ್ಪ ದಾನಾ, ಪ್ರಭು ಮಾಳನಾಯಕ, ಅಣ್ಣಾರಾವ ಪಾಟೀಲ್, ಶಿವಾನಂದ ಕಟ್ಟಿ, ಸುರೇಶ ಘಾಂಗ್ರೆ, ನೀಲಕಂಠ ಶೆಟ್ಟಿ, ಪ್ರದೀಪ ಪಸಾರ್ಗಿ, ಶಾಂತಕುಮಾರ ಅರಳಿ, ಸಂತೋಷ ಅತಿವಾಳ, ಸುಧಾಕರ ಸಂಗಮ, ಶಿವಕುಮಾರ ಸಾಗರ, ನರಸಿಂಹಲು ರಾಜೇಶ್ವರ, ಲಕ್ಷ್ಮಣ ಹಣಮಂತ, ಕೃಷ್ಣರಾಮಯ್ಯ, ಕೃಷ್ಣ ಕೊಡಂಬಲ್ ಇತರರಿದ್ದರು.

ಜಾತಿ ಪ್ರಮಾಣಪತ್ರ ಸೇರಿ ಅಲೆಮಾರಿ ಸುಡಗಾಡ ಸಿದ್ದರ ಸಮಾಜದ ಅಭಿವೃದ್ಧಿಗೆ ಸರ್ಕಾರದಿಂದ ಅಗತ್ಯ ಸೌಲಭ್ಯ ಕಲ್ಪಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವೆ. ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ್, ಭೀಮರಾವ ಪಾಟೀಲ್ ಅವರಿಗೂ ಸೂಚಿಸಿ ಸಮಾಜದ ಅಭಿವೃದ್ಧಿಗೆ ಸಹಕರಿಸುವೆ.

| ರಾಜಶೇಖರ ಪಾಟೀಲ್ ಮಾಜಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net