ಸಮಾಜದ ಧ್ವನಿಯಾದಾಗ ಸಂಘಟನೆ ಸಾಧ್ಯ

Immadi
Published on

ಚಿತ್ರದುರ್ಗ: ವಿಧಾನಸಭೆಯ ಹೊರಗೆ ಜನರು, ಅದರೊಳಗೆ ಜನಪ್ರತಿನಿಧಿಗಳು ಸಮಾಜದ ಧ್ವನಿಯಾದಾಗ ಮಾತ್ರ ಸಂಘಟನೆ ಸಾಧ್ಯ ಎಂಬುದನ್ನು ಎಲ್ಲರೂ ಅರಿಯಬೇಕು ಎಂದು ಇಮ್ಮಡಿ ಸಿದ್ದರಾಮೇಶ್ವರ ಶ್ರೀ ಸಲಹೆ ನೀಡಿದರು.

ಹೊರವಲಯದ ಭೋವಿ ಗುರುಪೀಠದಲ್ಲಿ ಭಾನುವಾರ ನಡೆದ ದೀಕ್ಷಾ ರಜತ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡದಿದ್ದರೆ, ಸಂಘಟನಾ ಮನೋಭಾವ ಇರುವುದಿಲ್ಲ. ರಾಜಕೀಯ ತೀಕ್ಷ್ಣತೆ ಬೆಳೆಸಿಕೊಳ್ಳುವುದಿಲ್ಲ. ಹೀಗಾಗಿ ಚಿಕ್ಕ ಸಭೆಗಳೇ ಮುಂದೆ ಬೃಹತ್ ಆಗಿ ಹೊರಹೊಮ್ಮುತ್ತವೆ. ಯಾವುದನ್ನೂ ನಿರ್ಲಕ್ಷಿಸಬಾರದು ಎಂದು ಹೇಳಿದರು.

ಕುಟುಂಬದ ಕುರಿತು ಸಮಾಲೋಚಿಸುವ ಹಾಗೆಯೇ ಸಮಾಜದ ಬಗ್ಗೆಯೂ ಕಾಳಜಿ ಇರಬೇಕು. ಅದಕ್ಕಾಗಿ ಯೋಜನೆ ಹಾಕಿಕೊಳ್ಳಬೇಕು. ಆರ್ಥಿಕವಾಗಿ ಸಬಲತೆ ಹೊಂದಿರುವ ಸಮಾಜಕ್ಕೆ ಗೌರವ ಹೆಚ್ಚು. ಹೀಗಾಗಿ ಶಿಕ್ಷಣ, ಆರ್ಥಿಕ ಪ್ರಗತಿಗೆ ಹೆಚ್ಚು ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್ ಮಾತನಾಡಿ, ಪಕ್ಷಾತೀತವಾಗಿ ಸಮಾಜ ಸಂಘಟಿಸಬೇಕಿದೆ. ಜು. 20ರಂದು ನಡೆಯಲಿರುವ ಸಮುದಾಯದ ಸ್ವಾಮೀಜಿ ಅವರ ದೀಕ್ಷಾ ರಜತ ಮಹೋತ್ಸವ ಮಾದರಿ ಜೊತೆಗೆ ಅರ್ಥಪೂರ್ಣವಾಗಿ ಆಚರಿಸಬೇಕಿದೆ ಎಂದರು.

ಅಧಿಕಾರಿಗಳು ವೃತ್ತಿಗೆ ಅಂಟಿಕೊಳ್ಳದೆ, ಸ್ವಾರ್ಥಿಗಳಾಗದೆ, ಸಮಷ್ಠಿಯ ಅಭಿವೃದ್ಧಿಗಾಗಿ ನಿಸ್ವಾರ್ಥಿಗಳಾಗಬೇಕು. ಆದಾಯದಲ್ಲಿ ಸ್ವಲ್ಪ ಕುಟುಂಬಕ್ಕೆ, ಸ್ವಲ್ಪ ಸಮಾಜಕ್ಕೆ ಎಂಬ ಭಾವ ಬರಬೇಕು. ರಾಜಕೀಯ ಶಕ್ತಿ ಹೆಚ್ಚಿಸಿಕೊಳ್ಳಬೇಕು. ಇದಕ್ಕೆ ಸಮಾಜದ ಶ್ರೀಗಳು ದಿಕ್ಸೂಚಿಯಾಗಿದ್ದಾರೆ ಎಂದು ಹೇಳಿದರು.

ಕೂಲಿ ಕಾರ್ಮಿಕರ ಮಕ್ಕಳು ಬಾಲಕಾರ್ಮಿಕರಾಗದೆ ವಿದ್ಯಾವಂತರನ್ನಾಗಿ ಮಾಡಬೇಕಿದೆ. ಭೋವಿ ನಿಗಮ ಕಟ್ಟ ಕಡೆಯ ಭೋವಿ ವ್ಯಕ್ತಿಯನ್ನು ಮುಖ್ಯವಾಹಿನಿಗೆ ತರುವ ಉದ್ದೇಶ ಹೊಂದಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಅಧ್ಯಕ್ಷರನ್ನು ನೇಮಕ ಮಾಡಲಿಲ್ಲ. ಅಧಿಕಾರಿಗಳ ದರ್ಪದಿಂದ ನಿಗಮದಲ್ಲಿ ಅವ್ಯವಸ್ಥೆಯಾಗಿದೆ. ಎಸ್‌ಐಟಿ ತನಿಖೆಯಿಂದ ಸತ್ಯ ಹೊರಬರಲಿದೆ ಎಂದರು.

ಜಿಲ್ಲಾ ಭೋವಿ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಸೂರಗೊಂಡನಹಳ್ಳಿ ಕೃಷ್ಣಮೂರ್ತಿ, ಹೊಸದುರ್ಗ ಚಂದ್ರಪ್ಪ, ಹೊಳಲ್ಕೆರೆ ಮಾಸ್ಟರ್ ರಂಗಪ್ಪ, ಎಸ್‌ಜೆಎಸ್ ವಿದ್ಯಾಸಂಸ್ಥೆಯ ನಿರ್ದೇಶಕರಾದ ವಿ.ಹನುಮಂತಪ್ಪ ಗೋಡೆಮನೆ, ಮಂಜುನಾಥ, ಎಚ್.ಆಂಜನೇಯ, ಹೊಸದುರ್ಗದ ಸುಬ್ಬಯ್ಯ, ರಾಮಚಂದ್ರಪ್ಪ, ಮಂಜಪ್ಪ, ಎನ್.ಪಿ.ಭರತ್, ಚಂದ್ರಶೇಖರ್, ಉಮೇಶ್, ಭೂತಭೋವಿ, ಭೋವಿ ಗುರುಪೀಠದ ಸಿಇಒ ಗೌನಹಳ್ಳಿ ಗೋವಿಂದಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net