ಸಮಾಜದ ಕಡೆಯ ವ್ಯಕ್ತಿಗೂ ಸಿಗಲಿ ಸೌಲಭ್ಯ, ಶ್ರೀ ಡಾ.ಬಸವರಮಾನಂದ ಸ್ವಾಮೀಜಿ ಅಭಿಮತ ಗ್ರಾಮೋದ್ಧಾರ ಕೇಂದ್ರಕ್ಕೆ ಚಾಲನೆ

Photo tgl 1(392020) gramoddara kendra inaguration
Published on

ತ್ಯಾಮಗೊಂಡ್ಲು: ಗ್ರಾಮೀಣ ಪ್ರದೇಶದ ಜನತೆಗೆ ಸೌಲಭ್ಯಗಳು ಸಮರ್ಪಕವಾಗಿ ಸಿಗದಿರುವುದು ಬೇಸರದ ಸಂಗತಿ. ಅದಕ್ಕಾಗಿಯೇ ಪ್ರತಿಯೊಂದು ಗ್ರಾಪಂನಲ್ಲಿ ದೇಸಿ ಸ್ಕಿಲ್ಸ್ ಸಂಸ್ಥೆಯ ಗ್ರಾಮೋದ್ಧಾರ ಕೇಂದ್ರ ಪ್ರಾರಂಭಿಸಿ, ಸೌಲಭ್ಯ ಕಲ್ಪಿಸಲು ಮುಂದಾಗಿರುವುದು ಶ್ಲಾಘನೀಯ ಎಂದು ವನಕಲ್ ಮಲ್ಲೇಶ್ವರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಡಾ.ಬಸವರಮಾನಂದ ಸ್ವಾಮೀಜಿ ಹೇಳಿದರು.

ಪಟ್ಟಣದ ವಿಎಸ್‌ಎಸ್‌ಎನ್ ಕಾಂಪ್ಲೆಕ್ಸ್ ಮಳಿಗೆಯಲ್ಲಿ ಗುರುವಾರ ದೇಸಿ ಸ್ಕಿಲ್ಸ್ ಸಂಸ್ಥೆಯ ಗ್ರಾಮೋದ್ಧಾರ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಿಗಬೇಕಾದ ಸೌಲಭ್ಯಗಳು ಸಿಕ್ಕಿದಾಗ ಮಾತ್ರ ಸರ್ಕಾರದ ಯೋಜನೆ ಸಾರ್ಥಕವಾಗುತ್ತವೆ. ಕೇಂದ್ರ ಸರ್ಕಾರದ ಆತ್ಮನಿರ್ಭರ ಮತ್ತು ಮೇಕ್ ಇನ್ ಇಂಡಿಯಾ ಸ್ವದೇಶಿ ಮಂತ್ರವನ್ನು ಯುವಕರೆಲ್ಲ ಅಳವಡಿಸಿಕೊಂಡು ನಿರುದ್ಯೋಗ ನಿವಾರಣೆ ಮಾಡಿಕೊಳ್ಳಲು ಹೊರಟಿರುವುದು ಹರ್ಷದಾಯಕ. ಈ ಯೋಜನೆಯನ್ನು ಗ್ರಾಮೋದ್ಧಾರ ಕೇಂದ್ರದ ಮೂಲಕ ತಲುಪಿಸಲು ಮುಂದಾಗಿರುವುದು ಮಾದರಿ ಕಾರ್ಯ ಎಂದರು.

ಗ್ರಾಮೋದ್ಧಾರ ಕೇಂದ್ರದ ಸಮನ್ವಯ ಅಧಿಕಾರಿ ಬಿ.ರಾಕೇಶ್ ಮಾತನಾಡಿ, ಈ ಕೇಂದ್ರದ ಮೂಲಕ ರೈತರಿಗೆ ಪಹಣಿ, ಬ್ಯಾಂಕ್, ರೈಲು, ವಿಮಾನ, ಬಸ್ ಟಿಕೆಟ್ ಬುಕ್ಕಿಂಗ್, ಪ್ಯಾನ್‌ಕಾರ್ಡ್, ಆಧಾರ್ ತಿದ್ದುಪಡಿ, ಅವಶ್ಯಕತೆ ಇರುವವರಿಗೆ ಮನೆಯಲ್ಲೇ ಸೇವೆ, ದಿನಸಿ, ಎಲೆಕ್ಟ್ರಾನಿಕ್ಸ್, ವಿದ್ಯುತ್ ಉಪಕರಣಗಳ ಮಾರಾಟ ಮುಂತಾದ 64 ಸೇವೆಗಳನ್ನು ಕಡಿಮೆ ಸೇವಾ ಶುಲ್ಕದೊಂದಿಗೆ ನೀಡಲಾಗುತ್ತದೆ ಎಂದು ಹೇಳಿದರು.

ವಿಎಸ್‌ಎಸ್‌ಎನ್ ಅಧ್ಯಕ್ಷ ಟಿ.ಎನ್.ಹನುಮಂತರಾಜು ಮಾತನಾಡಿ, ಕರೊನಾ ಸಮಯದಲ್ಲಿ ಸಾರ್ವಜನಿಕರು ಮುಕ್ತವಾಗಿ ಎಲ್ಲ ಕಡೆ ಓಡಾಡಲು ಆಗುವುದಿಲ್ಲ. ಗ್ರಾಮೋದ್ಧಾರ ಕೇಂದ್ರದಿಂದ ಕಡಿಮೆ ಸಮಯದಲ್ಲಿ ಬೇಕಾದ ಸೇವೆ ಪಡೆದು ಆರೋಗ್ಯವಾಗಿರಬಹುದು. ಪಟ್ಟಣಕ್ಕೆ ಅತ್ಯಂತ ಅವಶ್ಯವಾಗಿ ಬೇಕಾಗಿದ್ದ ಸೇವಾ ಕೇಂದ್ರ ಪ್ರಾರಂಭವಾಗಿ ಸಾರ್ವಜನಿಕರಿಗೆ ಅನುಕೂಲವಾಗಿದೆ ಎಂದರು.

ಗ್ರಾಪಂ ಮಾಜಿ ಸದಸ್ಯ ಪಿ.ಎನ್.ಸುಜಿತ್‌ಕುಮಾರ್, ಹಿರಿಯ ಮುಖಂಡ ಸಿ.ಎಸ್. ರಾಮನಾಥ್, ಜನೌಷಧ ಕೇಂದ್ರದ ಸಿಬ್‌ಂದಿ ಟಿ.ಎನ್.ಪ್ರದೀಪ್, ಟಿ.ಎಂ.ಮುನಿರಾಜು, ಟಿ.ಕಿರಣ್‌ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net