

ಚಿತ್ರದುರ್ಗ: ಬಸವ ಭಕ್ತರಾದ ಲಿಂಗಾಯತರು ತಮಗಾಗಿ ಬದುಕುವ ವ್ಯಕ್ತಿಗಳಲ್ಲ. ಸಮಾಜದ ಒಳಿತಿಗಾಗಿ ತುಡಿತ ಹೊಂದಿರುವವರು ಎಂದು ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಜಯಬಸವಕುಮಾರ ಶ್ರೀ ಹೇಳಿದರು.
ತರಾಸು ರಂಗಮಂದಿರದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದಿಂದ ಸೋಮವಾರ ಹಮ್ಮಿಕೊಂಡಿದ್ದ ಚಿತ್ರದುರ್ಗ ಜಿಲ್ಲಾ ಘಟಕ ಉದ್ಘಾಟನೆ, ಪದಗ್ರಹಣ ಹಾಗೂ ಸೇವಾ ದೀಕ್ಷಾ ಸಮಾರಂಭದಲ್ಲಿ ಮಾತನಾಡಿದರು.
ಕಾಯಕ ಪ್ರಧಾನವಾದ ಅಡಪದ, ಮಡಿವಾಳ, ಗಾಣಿಗ, ಕುಂಬಾರ ಸೇರಿ ಇನ್ನಿತರೆ ಸಣ್ಣ ಸಮಾಜದವರು ಎರಡ್ಮೂರು ದಶಕಗಳ ಹಿಂದೆ ಲಿಂಗಾಯತ ಎಂಬುದನ್ನು ಸೇರಿಸಿಕೊಂಡಿದ್ದರು. ಶಿಕ್ಷಣ, ಉದ್ಯೋಗಕ್ಕಾಗಿ ಮೀಸಲಾತಿ ಪ್ರಜ್ಞೆ ಬಂದ ನಂತರ ಜಾತಿ ಪ್ರಮಾಣ ಪತ್ರದಲ್ಲಿ ಬರೆಸುವವರ ಸಂಖ್ಯೆ ಕಡಿಮೆಯಾಗಿದೆ. ಮೀಸಲಾತಿ ಬದುಕಿನ ಮೇಲೂ ಪ್ರಭಾವ ಬೀರಿದ್ದು, ಲಿಂಗಾಯತ ಧರ್ಮಕ್ಕೆ ಸೇರಿ ಎಂದರೆ ಈ ತೊಡಕು ಅಡ್ಡವಾಗಿದೆ. ಮುಂದಿನ ಒಂದೂವರೆ ದಶಕದ ಬಳಿಕ ಬಸವ ತತ್ವವೇ ಎಲ್ಲದಕ್ಕೂ ಪರಿಹಾರ ಎಂದರು.
ನಮ್ಮದ್ದನ್ನು ಒಪ್ಪಿಕೊಳ್ಳುವ ಅಭಿಮಾನ ಕಳೆದುಕೊಳ್ಳುತ್ತಿದ್ದೇವೆ. ಸತ್ಯದ ಪರ ಇರುವವರನ್ನು ವಾಸ್ತವಿಕವಾಗಿ ದೂರ ಇಟ್ಟಿದ್ದೇವೆ. ಇದು ಉತ್ತಮ ಬೆಳವಣಿಗೆಯಲ್ಲ. ವಿರೋಧಿ ನಡೆ ಬೇಡ. ಪ್ರೀತಿಯಿಂದ ಸೆಳೆಯುವ ಪ್ರಯತ್ನ ಮಾಡಿ ಎಂದು ಸಲಹೆ ನೀಡಿದರು.
ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀ ಮಾತನಾಡಿ, ಲಿಂಗಧಾರಣೆ, ಲಿಂಗಪೂಜೆಗೆ ಮೊದಲ ಆದ್ಯತೆ ನೀಡಿ. ಇಷ್ಟಲಿಂಗ ಪೂಜೆ, ಶಿವಯೋಗಕ್ಕೆ ಬಸವಣ್ಣ ಒತ್ತು ನೀಡಿದ್ದರು. ನಡೆ-ನುಡಿ ಶುದ್ಧವಾಗದ ಹೊರತು ದಿನವಿಡೀ ಲಿಂಗ ಪೂಜೆಯಲ್ಲಿ ತೊಡಗಿದರೆ, ಫಲವೇನು ಎಂದು ಪ್ರಶ್ನಿಸಿದರು.
ಬಸವ ಸಿದ್ಧಾಂತದ ಮೂಲಕ ಸಮ ಸಮಾಜ ನಿರ್ಮಾಣದ ಸಂಕಲ್ಪ ತೊಡಬೇಕು. ಎಲ್ಲರನ್ನೂ ಒಪ್ಪಿಕೊಳ್ಳುವ ಮನಸ್ಸು ಹೊಂದಬೇಕು. ಈ ಪರಂಪರೆಯಲ್ಲಿ ಬಂದಿರುವ ನಾವೆಲ್ಲರೂ ಆ ನಿಟ್ಟಿನಲ್ಲಿ ಸಾಗಬೇಕು. ಸಂಘಟನೆ ಇಲ್ಲದೆ, ಹೋರಾಟ ಯಶಸ್ವಿಯಾಗದು. ಲಿಂಗವಂತ ತತ್ವ ಒಪ್ಪಿ ಬರುವವರೆಲ್ಲರೂ ಲಿಂಗವಂತರೇ ಎಂದರು.
ಸಾಹಿತಿ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಮಾತನಾಡಿ, ಈ ಹಿಂದೆ ಇದ್ದಂತ ಸಂಘಟನೆಗಳು ಬಸವಾದಿ ಶರಣರ ತತ್ವಾದರ್ಶ, ಆಶಯಗಳನ್ನು ಸಮರ್ಪಕವಾಗಿ ಪಾಲಿಸಲಿಲ್ಲ. ಹೀಗಾಗಿ ಜಾಗತಿಕ ಲಿಂಗಾಯತ ಮಹಾಸಭಾವನ್ನು ಸಂಘಟಿತವಾಗಿ ಮುನ್ನಡೆಸಬೇಕಿದೆ ಎಂದು ಸಲಹೆ ನೀಡಿದರು.
ಕೇಂದ್ರ ಸರ್ಕಾರಕ್ಕೆ ಈ ಹಿಂದೆ ಮನವಿ ಸಲ್ಲಿಸಿದ ವೇಳೆ ವೀರಶೈವ ವೈದಿಕ ಧರ್ಮ ಆಗಿರುವ ಕಾರಣ ವೀರಶೈವ-ಲಿಂಗಾಯತ ಧರ್ಮಕ್ಕೆ ಮಾನ್ಯತೆ ಸಿಗಲಿಲ್ಲ. ಹೀಗಾಗಿ ಜಾಗತಿಕ ಲಿಂಗಾಯತ ಮಹಾಸಭಾ ಸ್ಥಾಪನೆಯಾಗಲು ಕಾರಣವಾಯಿತು ಎಂದರು.
ಬಸವಾದಿ ಶರಣರ ಆದರ್ಶ ಮೈಗೂಡಿಸಿಕೊಂಡು ಅಲಕ್ಷಿತ ಸಮುದಾಯಗಳನ್ನು ಒಟ್ಟಾಗಿ ಕೊಂಡೊಯ್ಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಿದೆ. ಜಾತಿ ಮುಖ್ಯವಾಗದೆ, ಸಿದ್ಧಾಂತ ಆಚರಣೆಗೆ ಬದ್ಧರಾದವರನ್ನು ಒಳಗೆ ಕರೆದುಕೊಳ್ಳುವ ಧರ್ಮ ಇದಾಗಿದೆ ಎಂದು ಹೇಳಿದರು.
20 ಸಾವಿರ ಸದಸ್ಯರಿದ್ದಾರೆ: ರಾಜ್ಯದ 20 ಜಿಲ್ಲೆಗಳಲ್ಲಿ ಮಹಾಸಭಾದ ಜಿಲ್ಲಾ ಘಟಕಗಳಿವೆ. ದುಬೈನಲ್ಲಿ ಸಾಗರೋತ್ತರ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ ಸೇರಿ ಹೊರ ರಾಜ್ಯಗಳಲ್ಲೂ ಘಟಕಗಳು ಕಾರ್ಯನಿರ್ವಹಿಸುತ್ತಿವೆ. 20ಸಾವಿರಕ್ಕೂ ಹೆಚ್ಚು ಸದಸ್ಯರಿದ್ದಾರೆ ಎಂದು ಮಹಾಸಭಾದ ಬೆಳಗಾವಿ ಅಧ್ಯಕ್ಷ ಬಸವರಾಜ ರೊಟ್ಟಿ ತಿಳಿಸಿದರು. 30 ಪುಟಗಳ ಕಿರು ಹೊತ್ತಿಗೆ ಸಿದ್ಧವಾಗಿದ್ದು, ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದೇವೆ. ಈ ಮೂಲಕ ಅಲ್ಪಸಂಖ್ಯಾತ ಸಮುದಾಯಕ್ಕೆ ನ್ಯಾಯ ಕೊಡಲು ಒತ್ತಾಯಿಸಲಾಗುವುದು. ಮುರುಘಾಮಠ, ಸಾಣೇಹಳ್ಳಿ ಶ್ರೀಗಳು ಹೋರಾಟಕ್ಕೆ ಬಲ ತುಂಬಿದ್ದಾರೆ ಎಂದರು.
ಬಸವಮಂಟಪದ ದಾನೇಶ್ವರಿ ತಾಯಿ, ಮಹಾಸಭಾದ ಪದಾಧಿಕಾರಿಗಳಾದ ಹನುಮೇಶ ಕಲಮಂಗಿ, ಮಹಾದೇವಪ್ಪ, ರುದ್ರಮುನಿಸ್ವಾಮಿ, ಬಸವರಾಜ ಕಟ್ಟಿ, ಜಿ.ಡಿ.ಕೆಂಚವೀರಪ್ಪ, ಶೈಲಜಾ ಆರ್.ಬಾಬು, ಕುಸುಮಾ ಲೋಕೇಶ್ ಇತರರಿದ್ದರು.