

ಚನ್ನರಾಯಪಟ್ಟಣ: ವಿದ್ಯಾರ್ಥಿಗಳು ಅರಿವಿನ ಮೂಲಕ ಸಂಪಾದಿಸಿದ ಜ್ಞಾನವನ್ನು ಸಮಾಜದ ಒಳಿತಿಗೆ ಬಳಕೆ ಮಾಡಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಸಲಹೆ ನೀಡಿದರು.
ಪಟ್ಟಣದ ನೌಕರರ ಭವನದಲ್ಲಿ ಟೈಮ್ಸ್ ಪಿಯು ಕಾಲೇಜು ವತಿಯಿಂದ ಸೋಮವಾರ ಆಯೋಜಿಸಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಹಾಗೂ ಟೈಮ್ಸ್ ಗೌರವ ಸಮರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಸ್ತು, ಸಮಯ ಪ್ರಜ್ಞೆ, ಆತ್ಮವಿಶ್ವಾಸ ಬಹಳ ಮುಖ್ಯ ಎಂದರು.
ವಿದ್ಯಾರ್ಥಿಗಳು ತಮಗೆ ಸಿಗುವ ಅವಕಾಶಗಳನ್ನು ಶ್ರದ್ಧೆಯಿಂದ ಬಳಸಿಕೊಂಡು ವೈದ್ಯಕೀಯಕ್ಕೆ ಸಂಬಂಧಿಸಿದ ವಿವಿಧ ಕೋರ್ಸ್ ಗಳಿದ್ದು, ಅವುಗಳ ತರಬೇತಿ ಪಡೆಯುವುದರಿಂದ ಭವಿಷ್ಯದಲ್ಲಿ ವಿಪುಲ ಅವಕಾಶಗಳಿವೆ ಎಂದು ತಿಳಿಸಿದರು.
ಬೆಂಗಳೂರಿನ ಬಿಐಟಿ ಶಿಕ್ಷಣ ಸಂಸ್ಥೆ ಟಾಪ್ ಟೆನ್ ಕಾಲೇಜುಗಳಲ್ಲಿ ಒಂದಾಗಿದ್ದು, ಗುಣಮಟ್ಟದ ಶಿಕ್ಷಣ ಸಂಸ್ಥೆಗಳ ಗುರಿಯಾಗಬೇಕು ಪಿಯುಸಿ ಶಿಕ್ಷಣ ಜೀವನದ ಅತ್ಯಮೂಲ್ಯ ಘಟ್ಟವಾಗಿದೆ ಎಂದು ಎಚ್ಚರಿಸಿದರು.
ಬದುಕಿಗೆ ತಿರುವು ಕೊಡುವ ಈ ಹಂತದಲ್ಲಿ ಸಾಧಿಸುವ ಗುರಿಯೊಂದಿಗೆ ಶ್ರಮವಹಿಸಿಬೇಕು. ಮೊಬೈಲ್ ಬಳಕೆ ಇತಿಮಿತಿಯಲ್ಲಿರಲಿ. ವಾಟ್ಸ್ ಆ್ಯಪ್ ಹಾಗೂ ಫೇಸ್‌ಬುಕ್‌ಗಳಿಂದ ಹೊರಬಂದು ಸದಾ ಓದುವ ಪ್ರವೃತಿ ಬೆಳೆಸಿಕೊಳ್ಳಬೇಕು.ಆಗ ಮಾತ್ರ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ಸಲಹೆ ನೀಡಿದರು.
ಭಾವನಾತ್ಮಕ ಪ್ರಪಂಚವನ್ನು ಬೆಳೆಸಿಕೊಳ್ಳುವುದರ ಮೂಲಕ ವಿದ್ಯಾರ್ಥಿಗಳು ಜೀವನವನ್ನು ಸುಂದರವಾಗಿ ಇರಿಸಿಕೊಳ್ಳಬೇಕು. ಅಂಕಗಳ ಜತೆಗೆ ಜೀವನಮೌಲ್ಯಗಳು ಅತ್ಯಗತ್ಯ. ಕಠಿಣ ಪರಿಸ್ಥಿತಿಯನ್ನು ಎದುರಿಸುವ ಛಲವನ್ನು ವಿದ್ಯಾರ್ಥಿಗಳು ಬೆಳೆಸಿಕೊಂಡು ಜೀವನದಲ್ಲಿ ಉನ್ನತ ಮಟ್ಟಕ್ಕೇರಲಿ ಮತ್ತು ಸಮಾಜ ಮತ್ತು ರಾಷ್ಟ್ರಕ್ಕೆ ಉತ್ತಮ ಕೊಡುಗೆಯಾಗಿ ಹೊರಹೊಮ್ಮಲಿ ಎಂದು ಹಾರೈಸಿದರು.
ಕಾಲೇಜಿನ ಕಾರ್ಯದರ್ಶಿ ಗಂಗಾಧರ್ ಮಾತನಾಡಿ, ಜ್ಞಾನ ಸಂಪಾದನೆಗೆ ಶ್ರಮಿಸಿದಷ್ಟೂ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಉಜ್ವಲ ಭವಿಷ್ಯ ಹೊಂದಲು ನಾಂದಿಯಾಗುತ್ತದೆ. ಇದರಿಂದ ಇತರರ ಬದುಕು, ಬವಣೆಗೆ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು.
ಪೌರಕಾರ್ಮಿಕರಾದ ನಾಗಮ್ಮ, ಆರೋಗ್ಯ ಇಲಾಖೆಯ ಉಷಾರಾಣಿ, ಸೈನಿಕ ವೆಂಕಟೇಶ್, ಕೃಷಿಕ ಲಕ್ಷ್ಮೀಶ್, ಶಿಲ್ಪಕಲಾ ಕಲಾವಿದ ಪರಮೇಶ್, ಹಾಗೂ ಕ್ರೀಡಾಪಟು ನಿವೃತ್ತಿ ದೈಹಿಕ ಶಿಕ್ಷಕ ಸಿ.ಎನ್.ತಿಮ್ಮಪ್ಪ ಅವರ ಸಾಧನೆಯನ್ನು ಗುರುತಿಸಿ ಟೈಮ್ಸ್ ಗೌರವ ಸಮರ್ಪಣೆ ಮಾಡಲಾಯಿತು.
ಟೈಮ್ಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎ.ಬಿ.ಸುರೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಕೆ.ಎಂ.ಶ್ರೀಕಂಠಯ್ಯ ಇತರರು ಇದ್ದರು.