ಸಮಾಜದ ಏಳಿಗೆಗೆ ಶ್ರಮಿಸಿ

mysore
Published on

ಮೈಸೂರು: ಭವಿಷ್ಯದಲ್ಲಿ ಬೋಧನ ವೃತ್ತಿಯನ್ನು ಆಯ್ದುಕೊಳ್ಳುವ ವಿದ್ಯಾರ್ಥಿಗಳು ಸಮಾಜದ ಏಳಿಗೆಗೆ ಶ್ರಮಿಸಬೇಕು ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವ ಡಾ.ಬಿ.ಕೆ.ಪ್ರವೀಣ ಸಲಹೆ ನೀಡಿದರು.

ನಗರದ ಸೋಮಾನಿ ಬಿ.ಇಡಿ ಕಾಲೇಜಿನಲ್ಲಿ ಆಯೋಜಿಸಿದ್ದ 2022-24ನೇ ಸಾಲಿನ ಹಿರಿಯ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಶಿಕ್ಷಕರು ಸಮಾಜದ ಏಳಿಗೆಗಾಗಿ ಶ್ರಮಿಸಿ ಹಾಗೂ ವಿದ್ಯಾರ್ಥಿಗಳಲ್ಲಿ ನೈತಿಕ, ಮಾನವೀಯ ಮೌಲ್ಯ ಬೆಳೆಸುವ ಮುಖಾಂತರ ಉತ್ತಮ ಸಮಾಜ ರೂಪಿಸುವಲ್ಲಿ ಮತ್ತು ಪ್ರಮುಖ ವ್ಯಕ್ತಿಗಳನ್ನಾಗಿ ಮಾಡಲು ಶಿಕ್ಷಕರ ಪಾತ್ರ ಪ್ರಮುಖವಾಗಿರುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ಸಂಪನ್ಮೂಲಭರಿತ ವ್ಯಕ್ತಿಯಾಗಿ ರೂಪುಗೊಳ್ಳಬೇಕು ಎಂದರು

ಸಂಸ್ಥೆಯ ಅಧ್ಯಕ್ಷ ಡಾ.ಎಂ.ಪುಟ್ಟಸ್ವಾಮಿ ಮಾತನಾಡಿ, ಪದವೀಧರರು ಸ್ವಾವಲಂಬಿ ಜೀವನ ನಡೆಸಲು ಬೇಕಾಗುವ ಸಾಮರ್ಥ್ಯ ಹಾಗೂ ಕೌಶಲ ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಯಶಸ್ಸನ್ನು ಗಳಿಸಲು ಪರಿಶ್ರಮ ಅಗತ್ಯ ಎಂದು ತಿಳಿಸಿದರು.

ಪ್ರಾಂಶುಪಾಲೆ ಡಾ.ಆರ್.ಜಿ.ಉಷಾ ಮಾತನಾಡಿ, ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡುವ ಕೌಶಲ ಅಳವಡಿಸಿಕೊಂಡು ಉತ್ತಮ ಶಿಕ್ಷಕರಾಗಿ ಸಮಾಜದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಬೇಕು. ಶಿಕ್ಷಕ ವೃತ್ತಿಯನ್ನು ಗೌರವಿಸಬೇಕು ಎಂದರು.

ಡಾ.ಎಂ.ವಿನುತಾ ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ರಾಜೀವ್ ಶರ್ಮ ಅತಿಥಿಗಳನ್ನು ಪರಿಚಯಿಸಿ ಪದವೀಧರರ ಪಟ್ಟಿಯನ್ನು ಓದಿದರು.

ಬಿ.ಇಡಿ ಪದವಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಹಿರಿಯ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ, ನಗದು ಬಹುಮಾನ, ಪದಕ ನೀಡಿ ಗೌರವಿಸಲಾಯಿತು. ನಂತರ ಪ್ರತಿಯೊಂದು ಬೋಧನಾ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಹಿರಿಯ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಪದಕವನ್ನು ನೀಡಿ ಸನ್ಮಾನಿಸಲಾಯಿತು.

ಬೋಧಕ ಹಾಗೂ ಬೋಧಕೇತರ ವರ್ಗದವರು, ಹಿರಿಯ ವಿದ್ಯಾರ್ಥಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net