ಸಮಾಜದ ಏಳಿಗೆ ಜತೆ ಪ್ರಾಮಾಣಿಕತೆ ಮುಖ್ಯ

23bdvt3
ಭದ್ರಾವತಿ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಸಮಾಜ ಉದ್ಘಾಟನೆ ಸಮಾರಂಭದಲ್ಲಿ ಶ್ರೀಶಂಕರಾತ್ಮನಂದ ಸರಸ್ವತಿ ಸ್ವಾಮೀಜಿ ವಿದ್ಯಾರ್ಥಿನಿ ಕೀರ್ತನಾ ಅವರನ್ನು ಸನ್ಮಾನಿಸಿದರು. ಬಿ.ಕೆ.ಮೋಹನ್ ಇತರರಿದ್ದರು.
Published on

ಭದ್ರಾವತಿ: ಎಲ್ಲ ಯುಗಮಾನದಲ್ಲಿಯೂ ಋಣಿಯಾದ ಸಮಾಜ ಎಂದರೆ ಅದು ವಿಶ್ವಕರ್ಮ. ಇಂತಹ ಸಮಾಜದ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕು. ಶಾಸಕರು ಸರ್ಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆಗೊಳಿಸುವ ಜತೆಗೆ ನಿವೇಶನ ಮಂಜೂರಾತಿ ಮಾಡಿಸಬೇಕು ಎಂದು ಶ್ರೀಶಂಕರಾತ್ಮನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಹಳೇನಗರದ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವಕರ್ಮ ಸಮಾಜ ಉದ್ಘಾಟನೆ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಸಮಾಜ ದುರ್ಬಲವಾಗಿದ್ದರೆ ಆ ಸಮಾಜದ ಏಳಿಗೆ ಕಷ್ಟ ಎಂಬುದನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು. ಸಮಾಜದ ಸಂಘಟನೆಯಲ್ಲಿ ತೊಡಗಿಸಿಕೊಂಡವರು ಸ್ವಾರ್ಥ ಮನೋಭಾವದಿಂದ ಹೊರಬಂದು ಅಪಸ್ವರಗಳಿಗೆ ಎಡೆಮಾಡದೆ ಪ್ರಾಮಾಣಿಕವಾಗಿ ಶ್ರಮಿಸಬೇಕು. ನೂತನ ಪದಾಕಾರಿಗಳು ಜವಾಬ್ದಾರಿಗಳನ್ನು ಅರಿತುಕೊಂಡು ಕಾರ್ಯನಿರ್ವಹಿಸಬೇಕು. ಮಹಿಳೆಯರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಜತೆಗೆ ವಿದ್ಯಾವಂತರನ್ನಾಗಿ ಮಾಡಬೇಕು ಎಂದು ತಿಳಿಸಿದರು.

ನಗರಸಭೆ ಸದಸ್ಯ ಬಿ.ಕೆ.ಮೋಹನ್ ಮಾತನಾಡಿ, ವಿಶ್ವಕರ್ಮ ಸಮಾಜಕ್ಕೆ ತನ್ನದೆ ಆದ ಪರಂಪರೆ ಇದೆ. ಈ ಸಮಾಜದ ಕೊಡುಗೆ ಅನನ್ಯವಾಗಿದೆ. ಇಂತಹ ಸಮಾಜ ಇನ್ನೂ ಸಂಘಟಿತಗೊಂಡು ಬಲಗೊಳ್ಳಬೇಕು ಎಂದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ ಕೀರ್ತನಾ ಅವರನ್ನು ಸನ್ಮಾನಿಸಿದರು.

ಸಮಾಜದ ಅಧ್ಯಕ್ಷ ಬಿ.ಕೆ.ಶ್ರೀನಾಥ್, ಗೌರವಾಧ್ಯಕ್ಷ ಬಿ.ಎಲ್.ನಾಗರಾಜ್, ಕಾರ್ಯಾಧ್ಯಕ್ಷ ಸಿ.ರಾಮಚಾರಿ, ಉಪಾಧ್ಯಕ್ಷರಾದ ರವಿಶಂಕರಚಾರಿ, ಆರ್.ದೊಡ್ಡವೀರಚಾರ್, ಪ್ರಧಾನ ಕಾರ್ಯದರ್ಶಿ ಬಿ.ಮಂಜುನಾಥ್, ಸಹ ಕಾರ್ಯದರ್ಶಿ ಪಿ.ಮಂಜುನಾಥ್, ಖಜಾಂಚಿ ಎ.ಬಸವರಾಜಚಾರಿ, ಸಂಘಟನಾ ಕಾರ್ಯದರ್ಶಿ ಕುಮಾರಚಾರಿ, ಸಹ ಸಂಘಟನಾ ಕಾರ್ಯದರ್ಶಿಗಳಾದ ಎಸ್.ಸುಭಾಷ್, ಮಂಜೇಶ್ ವಸಿಷ್ಠ, ಎಸ್.ಭಾನುಪ್ರಕಾಶ್, ಎನ್.ರಘು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net