

ಶಿರಸಿ: ಕೃಷಿಕರು ಸಮಾಜದ ಆರೋಗ್ಯಕ್ಕಾಗಿ ಹೆಚ್ಚೆಚ್ಚು ವನಸ್ಪತಿ ಗಿಡಗಳನ್ನು ನೆಡಬೇಕು ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.
ಸ್ವರ್ಣವಲ್ಲೀಯಲ್ಲಿ ಶ್ರೀಗಳು ತಮ್ಮ 54ನೇ ವರ್ಧಂತಿ ಉತ್ಸವ ನಿಮಿತ್ತ ಸರಳವಾಗಿ ನಡೆದ ವಿವಿಧ ಧಾರ್ವಿುಕ ಕಾರ್ಯಕ್ರಮ ಹಾಗೂ ಪವಿತ್ರ ವನದಲ್ಲಿ ಬಿಲ್ವಪತ್ರೆ ವೃಕ್ಷಾರೋಪಣ ನೆರವೇರಿಸಿ ಶಿಷ್ಯರಿಗೆ ಸಂದೇಶ ನೀಡಿದರು.
ಸಮಾಜದ ಆರೋಗ್ಯಕ್ಕೆ ಅನುಕೂಲ ಮಾಡಿಕೊಡಬೇಕು. ಇದಕ್ಕಾಗಿ ಪ್ರತಿಯೊಬ್ಬರೂ ವನಸ್ಪತಿ ವೃಕ್ಷ ನೆಟ್ಟು ಬೆಳೆಸಬೇಕು. ಇದರಿಂದ ರೋಗ ರುಜಿನಗಳು ಬಂದಾಗ ಎದುರಿಸಲು ಅನುಕೂಲ ಆಗುತ್ತದೆ. ವನಸ್ಪತಿ
ಬೆಳೆಸಲು ಬಯಲು ಸೀಮೆಗಿಂತ ಇಲ್ಲಿ ಹೆಚ್ಚು ಅನುಕೂಲ. ಮಲೆನಾಡಿನ ವಾತಾವರಣದಲ್ಲಿ ಬೆಳೆದವುಗಳು ಹೆಚ್ಚಿನ ಶಕ್ತಿ, ಔಷಧ ಗುಣಗಳು ಇರುತ್ತವೆ ಎಂದು ಹೇಳಿದರು.
ರೋಗದ ವಾತಾವರಣ ಇದ್ದಾಗ ಗಿಡಮೂಲಿಕೆಗಳ ಹುಡುಕಾಟ ನಡಸುತ್ತೇವೆ. ತಕ್ಷಣ ಅವು ಸಿಗುವುದಿಲ್ಲ. ಅಲ್ಲಿಗೆ ಮನೆಗೆ ಬೆಂಕಿ ಬಿದ್ದಾಗ ಬಾವಿ ತೋಡಿದಂತೆ
ಆಗುತ್ತದೆ. ಇದಕ್ಕಾಗಿ ನಾವು ಮೊದಲೇ ಸಿದ್ಧರಾಗಿರಬೇಕು ಎಂದರು.
ಕರೊನಾ ರೋಗ ಕಡಿಮೆ ಆಗಿದೆ. ಆದರೆ, ಸಂಪೂರ್ಣ ಹೋಗಿಲ್ಲ. ತಜ್ಞರು ಮತ್ತೆ ಬರುತ್ತಿದೆ ಎನ್ನುತ್ತಿದ್ದಾರೆ. ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂದೂ ಸಲಹೆ ಮಾಡಿದರು. ಈ ವೇಳೆ ಮಠದ ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ನಳ್ಳಿ, ವ್ಯವಸ್ಥಾಪಕ ಎಸ್.ಎನ್. ಗಾಂವಕರ, ಆರ್.ಎನ್. ಹೆಗಡೆ ಉಳ್ಳಿಕೊಪ್ಪ, ಮಠದ ಪುರೋಹಿತರು, ವೈದಿಕರು ಇದ್ದರು.
ಮಠದಿಂದ ಊಟ ವಿತರಣೆ
ವರ್ಧಂತ್ಯುತ್ಸವದ ಅಂಗವಾಗಿ ಅಥರ್ವಶೀರ್ಷ ಹವನ ಮಹಾಮೃತ್ಯುಂ ಜಯ ಹವನ ಆಯುಷ್ಯ ಚರು ಹವನ ಶ್ರೀ ಸೂಕ್ತ- ಪುರುಷ ಸೂಕ್ತ ಹವನ ಮತ್ತು ಕೋವಿಡ್ 19 ರೋಗವು ಶೀಘ್ರವಾಗಿ ನಿವಾರಣೆಯಾಗಿ ಎಲ್ಲ ಜನರ ಆರೋಗ್ಯ ಪ್ರಾಪ್ತಿಗೆ ಧನ್ವಂತರಿ ಹವನವನ್ನು ನೆರವೇರಿಸ ಲಾಯಿತು. ಇದೇ ಸಂದರ್ಭದಲ್ಲಿ ಸರ್ಕಾರಿ ಪಂಡಿತ ಆಸ್ಪತ್ರೆ, ಟಿಎಸ್ಎಸ್ ಆಸ್ಪತ್ರೆ, ಮಹಾಲಕ್ಷ್ಮೀ ಆಸ್ಪತ್ರೆ, ಸಿಟಿ ಸ್ಕಾ್ಯನ್ ಸೆಂಟರ್ ಆಸ್ಪತ್ರೆಗಳಲ್ಲಿ 180 ಕರೊನಾ ರೋಗಿಗಳಿಗೆ ಮತ್ತು ಇತರ ರೋಗಿಗಳಿಗೆ, ಆಸ್ಪತ್ರೆ ಸಿಬ್ಬಂದಿಗೆ ಮಠದಿಂದ ಊಟ ನೀಡಲಾಯಿತು.