

ಕಮಲನಗರ: ವಚನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ಸರಿಪಡಿಸಿದ ಶಿವಯೋಗಿ ಸಿದ್ಧರಾಮೇಶ್ವರ ಅವರು, ಅನುಭವ ಮಂಟಪದ ಧ್ರುವತಾರೆ. ಜಾತೀಯತೆ, ಆಚಾರ-ವಿಚಾರ ಎಂಬ ಮನೋಭಾವ ಬಿಟ್ಟು ನಾವೆಲ್ಲರೂ ಒಂದೇ ಎಂಬ ಸಂದೇಶ ನೀಡಿದ ಮಹಾನ್ ಶರಣರಾಗಿದ್ದರು ಎಂದು ಗ್ರೇಡ್-೨ ತಹಸೀಲ್ದಾರ್‌ರಮೇಶ ಪೆದ್ದೆ ಹೇಳಿದರು.
ಪಟ್ಟಣದ ತಹಸಿಲ್ ಕಾರ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತನ್ನನ್ನು ತಾನು ಅರಿತು ಬಾಳಿದ ಸಿದ್ಧರಾಮೇಶ್ವರರು ಕೆರೆ, ಕಾಲುವೆ, ದೇವಸ್ಥಾನ ಕಟ್ಟಿಸುವ ಮೂಲಕ ಕರ್ಮಮಾರ್ಗದಲ್ಲಿ ಸಾಗಿ ಮಾನವ ಜನ್ಮ ಸಾರ್ಥಕ ಎಂದು ನಿರೂಪಿಸಿದರು. ನಂತರದ ದಿನಗಳಲ್ಲಿ ಬಸವಣ್ಣ ಹಾಗೂ ಸಾವಿರಾರು ಶರಣರ ಭೇಟಿಯಿಂದ ಜ್ಞಾನ ಮಾರ್ಗದಲ್ಲಿ ಸಾಗಿದರು. ಆ ಮೂಲಕ ಸಕಲ ಜೀವಾತ್ಮರಿಗೆ ಒಳಿತನ್ನು ಬಯಸುವ ಹೃದಯವಂತ ಸಿದ್ಧರಾಮೇಶ್ವರರಾಗಿದ್ದರು ಎಂದು ಬಣ್ಣಿಸಿದರು.
ತಾಪಂ ಮಾಜಿ ಅಧ್ಯಕ್ಷ ಶ್ರೀರಂಗ ಪರಿಹಾರ ಮಾತನಾಡಿ, ೧೨ನೇ ಶತಮಾನದ ಶರಣ ಸಿದ್ಧರಾಮೇಶ್ವರರು ಸಮಾಜದ ಒಳಿತಿಗಾಗಿ ಬದುಕಿದ ನಿಜವಾದ ಕಾಯಕಯೋಗಿ. ಬದುಕು ಶ್ರೇಷ್ಠವಾಗಬೇಕಾದರೆ ದುಡಿಮೆಯನ್ನು ಪೂಜಿಸಬೇಕು. ದುಡಿಮೆಯಲ್ಲಿ ಭಗವಂತನನ್ನು ಕಾಣಬೇಕು. ಹೀಗಾಗಿ ಪ್ರತಿಯೊಬ್ಬರೂ ಸೋಮಾರಿಗಳಾಗದೇ ದುಡಿಮೆಗೆ ಪ್ರಾಮುಖ್ಯತೆ ನೀಡಬೇಕೆಂದು ಹೇಳಿದರು.
ಸಿದ್ಧರಾಮೇಶ್ವರ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಸಂಜೀವ ಒಡೆಯರ್, ರಾಜಕುಮಾರ ಮೇತ್ರೆ, ಸುಭಾಷ ಗಾಯಕವಾಡ, ಬಾಲಾಜಿ ತೇಲಂಗ್, ಮಹೇಶ ಸಜ್ಜನ್, ಸಾಯಿನಾಥ ಕಾಂಬಳೆ, ಶಾಂತಕುಮಾರ ಬಿರಾದಾರ, ಶಾಲಿವಾನ ಒಡೆಯರ್, ರವಿ ಕಾರಬಾರಿ, ಪ್ರವೀಣ ಬಿರಾದಾರ, ಸುಭಾಷ ಮಿರ್ಚೆ ಇತರರಿದ್ದರು.