ಸಮಾಜಕ್ಕೆ ಸಿದ್ಧರಾಮೇಶ್ವರರ ಕೊಡುಗೆ ಅಪಾರ

Siddharameshwara
Published on

ಚಿತ್ರದುರ್ಗ: ಸಿದ್ಧರಾಮೇಶ್ವರರು ಎಲ್ಲ ವರ್ಗಗಳ ಏಳಿಗೆಗಾಗಿ ಶ್ರಮಿಸಿದರು. ಭಕ್ತಿ, ಕಾಯಕ ನಿಷ್ಠೆ ಮೂಲಕ ಸಮಾಜಮುಖಿ ಕಾರ್ಯಗಳನ್ನು ಕೈಗೊಂಡರು. ಹೀಗಾಗಿ ಅವರ ಕೊಡುಗೆ ಅಪಾರ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಬಣ್ಣಿಸಿದರು.

ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆಯಿಂದ ಡಿಸಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಸಿದ್ಧರಾಮೇಶ್ವರರ ವಚನಗಳು ಇಂದಿಗೂ ಪ್ರಸ್ತುತ. ಅವು ಪಠ್ಯಕ್ಕೆ ಮಾತ್ರ ಸೀಮಿತವಲ್ಲ. ವಿದ್ಯಾರ್ಥಿಗಳು ವಚನಗಳ ಆಳ-ಅಗಲ ಅರಿತಾಗ ಮಾತ್ರ ಮಹನೀಯರ ಚಿಂತನೆ ಅರ್ಥೈಸಿಕೊಂಡು ಸಮಾಜಕ್ಕಾಗಿ ಶ್ರಮಿಸಲು ಸಾಧ್ಯ ಎಂದು ಸಲಹೆ ನೀಡಿದರು.

ಉಪನ್ಯಾಸಕ ಡಾ.ಬಿ.ಎಂ.ಗುರುನಾಥ ಮಾತನಾಡಿ, ಸಿದ್ಧರಾಮರು ಜನಹಿತ ಕಾರ್ಯಗಳಿಂದ ಹಲವರ ಬದುಕಿಗೆ ದಾರಿದೀಪವಾದರು. ಅವರ ಆದರ್ಶ ಯುವಸಮೂಹ ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ವ್ಯಕ್ತಿ ಪ್ರತಿಷ್ಠೆಗೆ ಒಳಗಾಗಿ ಇನ್ನೊಬ್ಬರನ್ನು ಅಪಮಾನಿಸುವ ನುಡಿ, ವಿಜೃಂಭಿಸುತ್ತಿದೆ. ಇಂತಹ ಸಂದರ್ಭದಲ್ಲಿ ಸಿದ್ಧರಾಮರು ಸಾಗಿ ಬಂದ ಮಾರ್ಗ ಅನುಸರಿಸುವ ಅಗತ್ಯವಿದೆ ಎಂದರು.

ಜಿಲ್ಲಾ ಭೋವಿ ಸಂಘದ ಅಧ್ಯಕ್ಷ ಟಿ.ತಿಪ್ಪೇಸ್ವಾಮಿ ಮಾತನಾಡಿ, 12ನೇ ಶತಮಾನದ ಸಿದ್ಧರಾಮರು ಕಾಯಕದಿಂದ ಕೈಲಾಸ ಕಂಡ ಪುಣ್ಯಾತ್ಮರು ಎಂದು ಬಣ್ಣಿಸಿದರು.

ಇದೇ ವೇಳೆ ಮುರಾರ್ಜಿ ಮತ್ತು ತಂಡದವರು ಗೀತಗಾಯನ ಪ್ರಸ್ತುತ ಪಡಿಸಿದರು. ಸಂಘದ ಕಾರ್ಯದರ್ಶಿ ಎಚ್.ಲಕ್ಷ್ಮಣ್, ಕೋಶಾಧ್ಯಕ್ಷ ಮಂಜುನಾಥ್, ನಿಕಟಪೂರ್ವ ಅಧ್ಯಕ್ಷ ತಿಮ್ಮಣ್ಣ, ಭೋವಿ ಗುರುಪೀಠದ ಸಿಇಒ ಗೌನಹಳ್ಳಿ ಗೋವಿಂದಪ್ಪ, ಮುಖಂಡರಾದ ನರೇನಹಳ್ಳಿ ಅರುಣ್‌ಕುಮಾರ್, ಭರತ್, ವೆಂಕಟೇಶ್, ಸಿ.ರಂಗನಾಯ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net