

ತುಮಕೂರು: ಆದಿಚುಂಚನಗಿರಿ ಮಹಾಸಂಸ್ಥಾನದ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಧಾರ್ಮಿಕ ಕ್ಷೇತ್ರದಲ್ಲಿ ತಮ್ಮದೇ ಆದ ಹೆಜ್ಜೆ ಮೂಡಿಸಿ, ಧಾರ್ಮಿರ ಪರಂಪರೆಯ ಮೌಲ್ಯ ಸಾರಿದ್ದಾರೆ ಎಂದು ಕುಣಿಗಲ್ನ ಅರೇ ಶಂಕರ ಮಠದ ಶ್ರೀ ಸಿದ್ದರಾಮ ಚೈತನ್ಯ ಸ್ವಾಮೀಜಿ ಹೇಳಿದರು.
ಜಿಲ್ಲಾ ಒಕ್ಕಲಿಗರ ಒಕ್ಕೂಟ ಹಾಗೂ ವಿವಿಧ ಒಕ್ಕಲಿಗ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಸೋಮವಾರ ನಗರದ ಬಿಜಿಎಸ್ ವೃತ್ತದಲ್ಲಿ ಹಮ್ಮಿಕೊಂಡಿದ್ದ ಡಾ.ಬಾಲಗಂಗಾಧರನಾಥ ಸ್ವಾಮೀಜಿಗಳ 12ನೇ ಪುಣ್ಯಸ್ಮರಣೆಯಲ್ಲಿ ಸ್ವಾಮೀಜಿಗಳ ಭಾವಚಿತ್ರ ಹಾಗೂ ನಾಮಫಲಕಕ್ಕೆ ಪುಷ್ಪಾರ್ಚನೆ ಮಾಡಿ ಭಕ್ತಿ ನಮನ ಸಲ್ಲಿಸಿ ಮಾತನಾಡಿದರು. ಡಾ.ಬಾಲಗಂಗಾಧರನಾಥ ಸ್ವಾಮೀಜಿ ಶತಮಾನದ ಮಹಾನ್ ಯೋಗಿಯಾಗಿದ್ದಾರೆ. ಸಮಾಜಕ್ಕೆ ಅವರು ಕೊಟ್ಟ ಕೊಡುಗೆ ಅಪಾರ, ಸಮಾಜ ಬಾಂಧವರು ಸ್ವಾಮೀಜಿಗಳಿಗೆ ಋಣಿಯಾಗಿರಬೇಕು. ಸೇವೆ ಹಾಗೂ ಕೊಡುಗೆ ಒಂದೇ ವರ್ಗಕ್ಕೆ ಸೀಮಿತವಾಗಿರಲಿಲ್ಲ. ಹಿಂದುಳಿದ ವರ್ಗಗಳ ಸ್ವಾಮೀಜಿಗಳು ಮಠ ಸ್ಥಾಪನೆ ಮಾಡಲು ಪ್ರೇರಣೆ ನೀಡಿ ಆ ಮೂಲಕ ಆ ಸಮಾಜದ ಧಾರ್ಮಿಕ ಪರಂಪರೆ ಮುಂದುವರಿಸಲು ನೆರವಾದರು ಎಂದರು.
ಒಕ್ಕಲಿಗರಲ್ಲಿ ಸ್ವಾಭಿಮಾನ ಮೂಡಿಸಿದ, ಸಮಾಜಕ್ಕೆ ತೊಂದರೆಯಾದಾಗ ನಿರ್ಭೀತಿಯಿಂದ ಧ್ವನಿ ಎತ್ತಿ ಒಕ್ಕಲಿಗರಿಗೆ ಧೀಮಂತ ಶಕ್ತಿಯಾಗಿದ್ದ ಶ್ರೀ ಬಾಲಗಂಗಾಧರ ನಾಥ ಸ್ವಾಮೀಜಿಗಳು ಸದಾ ಸ್ಮರಣೀಯರು. ಪೂಜ್ಯರ ಜನ್ಮದಿನ, ಪುಣ್ಯಸ್ಮರಣೆಯನ್ನು ಸಮಾಜದ ಬಾಂಧವರು ಹಳ್ಳಿ ಹಳ್ಳಿಗಳಲ್ಲಿ, ಬಡಾವಣೆ ಬಡಾವಣೆಗಳಲ್ಲಿ ಆಚರಣೆ ಮಾಡಿ, ಅನ್ನಸಂತರ್ಪಣೆ, ಪ್ರಸಾದ ವಿತರಣೆಯಂತಹ ಕಾರ್ಯಕ್ರಮ ಮಾಡಿ ಸಮಾಜಕ್ಕೆ ಪೂಜ್ಯರ ಕೊಡುಗೆ ತಿಳಿಸುವ, ಅವರ ಸೇವೆ ಸ್ಮರಿಸುವ ಕೆಲಸ ಮಾಡಬೇಕು ಎಂದರು.
ಶಾಸಕ ಬಿ.ಸುರೇಶ್ಗೌಡ ಮಾತನಾಡಿ, ಸ್ವಾಮೀಜಿಗಳ ಪುಣ್ಯಸ್ಮರಣೆಯಂತಹ ಕಾರ್ಯಕ್ರಮಗಳು ಒಕ್ಕಲಿಗರ ಕುಟುಂಬದ ಆಚರಣೆಯಾಗಬೇಕು. ಒಕ್ಕಲಿಗರಲ್ಲಿ ಒಗ್ಗಟ್ಟು ಇಲ್ಲ ಎಂಬ ಆಪಾದನೆಗಳಿವೆ. ಒಕ್ಕಲಿಗರ ಸಂಘಟಿತರಾಗಿ ನಮ್ಮ ಅಸ್ತಿತ್ವ ಸಾರಬೇಕು. ಬಾಲಗಂಗಾಧರನಾಥ ಸ್ವಾಮೀಜಿಗಳು ಹಾಕಿಕೊಟ್ಟ ಹಾದಿಯಲ್ಲಿ ನಾವೆಲ್ಲಾ ಸಾಗಬೇಕು ಎಂದರು.
ಮಾಜಿ ಶಾಸಕ ಎಚ್.ನಿಂಗಪ್ಪ ಮಾತನಾಡಿ, ಸ್ವಾಮೀಜಿಗಳ ಪುಣ್ಯಸ್ಮರಣೆ ಪುಣ್ಯದ ಕಾರ್ಯ, ಪೂಜ್ಯರು ಸಮಾಜಕ್ಕೆ ಅನೇಕ ಕೊಡುಗೆ ನೀಡಿದ್ದಾರೆ, ಶಾಲಾ&ಕಾಲೇಜು, ಆಸ್ಪತ್ರೆಗಳನ್ನು ಸ್ಥಾಪನೆ ಮಾಡಿ ಸಮಾಜಕ್ಕೆ ನೆರವಾಗಿದ್ದಾರೆ. ಸೇವೆ ಮೂಲಕ ವಿಶ್ವದಲ್ಲೇ ಹೆಸರಾಗಿದ್ದಾರೆ. ಅರೇಶಂಕರ ಮಠ ಸೇರಿದಂತೆ ಸಮುದಾಯದ ಮಠಗಳ ಬೆಳವಣಿಗೆಗೆ ಭಕ್ತರು ಕೈ ಜೋಡಿಸಿ, ಹೆಚ್ಚು ಸೇವಾಕಾರ್ಯ ನಡೆಯಲು ಸಹಕರಿಸಬೇಕು ಎಂದರು. ಶಾಸಕ ಜಿ.ಬಿ.ಜ್ಯೋತಿಗಣೇಶ್ ಸ್ವಾಮೀಜಿಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು.
ಜಿಲ್ಲಾ ಒಕ್ಕಲಿಗರ ಒಕ್ಕೂಟದ ಅಧ್ಯಕ್ಷ ಡಾ.ವಿಜಯಕುಮಾರ್, ಉಪಾಧ್ಯಕ್ಷ ಭೈರವ ಗಿರೀಶ್, ಕಾರ್ಯದರ್ಶಿ ಎಚ್ಎಂಟಿ ಬೋರೇಗೌಡ, ಖಜಾಂಚಿ ವಿಶ್ವೇಶ್ವರಯ್ಯ, ಸಮುದಾಯದ ಮುಖಂಡ ನರಸೇಗೌಡ, ಆರ್.ಕಾಮರಾಜ್, ರಂಗಪ್ಪ, ವೆಂಕಟೇಶಬಾಬು, ಬೆಳ್ಳಿ ಲೋಕೇಶ್, ದೊಡ್ಡಲಿಂಗಪ್ಪ, ಟಿ.ಆರ್ನಾಗರಾಜ್, ನೇತಾಜಿ ಶ್ರೀಧರ್, ಬ್ಯಾಟರಂಗೇಗೌಡ, ಎಂ.ಕೆ.ವೀರಯ್ಯ, ದೇವೇಗೌಡ, ಸಿದ್ಧಲಿಂಗೇಗೌಡ, ರಂಗಮಣಿ ಕಾಮೇಶ್, ಪ್ರೊ.ಕೆ.ಚಂದ್ರಣ್ಣ, ಟಿ.ಆರ್.ಚಿಕ್ಕರಂಗಣ್ಣ, ಭೈರಣ್ಣ, ಜಿ.ಕೆ.ಶ್ರೀನಿವಾಸ್, ಜಗದೀಶ್, ರವಿಗೌಡ, ಸಿದ್ಧರಾಜುಗೌಡ, ಶಂಕರ್, ದಿನೇಶ್, ಧರಣೇಂದ್ರಕುಮಾರ್, ಶ್ರೀನಿವಾಸ್, ಕೆಂಪರಾಜು ಮತ್ತಿತರರು ಇದ್ದರು.