

ಕೊಳ್ಳೇಗಾಲ: ಕ್ರೈಸ್ತರು ಸಮಾಜಕ್ಕೆ ಮಾದರಿಯಾಗಿ ಬದುಕಬೇಕು ಹಾಗೂ ಬಡವರ ಏಳಿಗೆಗೆ ಶ್ರಮಿಸಬೇಕು ಎಂದು ಕರಾವಳಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಸಂಘ-ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಗ್ರೇಷಿಯನ್ ರಾಡ್ರಿಗಸ್ ಸಲಹೆ ನೀಡಿದರು.
ಪಟ್ಟಣದ ಜೆಎಸ್‌ಎಸ್ ಕಾಲೇಜು ಸಮೀಪದಲ್ಲಿ ತಾಲೂಕು ಕ್ರೈಸ್ತ ಒಕ್ಕೂಟದ ನೂತನ ಕಚೇರಿ ಉದಾಟಿಸಿ ಮಾತನಾಡಿದರು.
ಕ್ರೈಸ್ತ ಸಮುದಾಯದವರು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಮುಂದೆ ಬರಬೇಕು. ಇದರ ಜತೆಗೆ ಸರ್ಕಾರದ ಪ್ರತಿಯೊಂದು ಸವಲತ್ತುಗಳನ್ನು ಪಡೆದುಕೊಂಡು ಇತರರಿಗೆ ಸವಲತ್ತುಗಳನ್ನು ಒದಗಿಸಿ ಕೊಡಬೇಕು. ಸಂಘ-ಸಂಸ್ಥೆಗಳು ಮಾಡಿಕೊಳ್ಳುವುದು ದೊಡ್ಡದಲ್ಲ, ಅದರಿಂದ ಇತರರಿಗೆ ಅನೇಕ ಅನುಕೂಲಗಳು ದೊರಕಿಸುವಂತಾಗಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಕೆಲವರು ಸಂಘ-ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಇದು ಸರಿಯಲ್ಲ, ಹಾಗಾಗಿ ಕ್ರೈಸ್ತ ಒಕ್ಕೂಟದ ಸಂಘ ಸಮಾಜಕ್ಕೆ ಮಾದರಿಯಾಗಿ ಅನೇಕ ಜನರಿಗೆ ಉಪಯೋಗವಾಗಬೇಕು ಎಂದರು. ಸಂತ ಫ್ರಾನ್ಸಿಸ್ ಅಸ್ಸಿಸ್ಸಿ ಸಭೆಯ ಗುರು ಎಂ.ರಾಯಪ್ಪ ಮಾತನಾಡಿ, ಕಚೇರಿಯನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು. ಜತೆಗೆ ಕೆಟ್ಟದ್ದನ್ನು ಮಾಡದೆ ಜನರಿಗೆ ಒಳ್ಳೆಯದನ್ನು ಮಾಡಬೇಕು, ಕಷ್ಟದಲ್ಲಿರುವವರಿಗೆ ದಾರಿ ದೀಪವಾಗಬೇಕು ಎಂದರು.
ಫಾಸ್ಟರ್ ಜೋಯೆಲ್ ನಾರಾಯಣ್, ತಾಲೂಕು ಕ್ರೈಸ್ತ ಒಕ್ಕೂಟದ ಅಧ್ಯಕ್ಷ ಅಂತೋಣಿ ದಿನೇಶ್, ಉಪಾಧ್ಯಕ್ಷ ಕಿರಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ತೇಜಪಾಲ್, ಖಜಾಂಚಿ ವಿಜಯಕುಮಾರ್, ನಿರ್ದೇಶಕ ಮಿಲ್ಟನ್ ಕ್ರಿಸ್ಟೋಫರ್, ರಾಬರ್ಟ್, ಕ್ರೈಸ್ತ ಮುಖಂಡ ನರೇಂದ್ರನಾಥ್, ಅಮರೀಶ್, ಚಾಮರಾಜ್, ಜಾರ್ಜ್ ಫಿಲೀಪ್, ಸಭಾ ಹಿರಿಯರು ಮತ್ತು ಒಕ್ಕೂಟದ ಪದಾಧಿಕಾರಿಗಳು ಹಾಗೂ ಆಡಳಿತ ಮಂಡಳಿ ಸದಸ್ಯರು ಇದ್ದರು.