

ಸೇಡಂ: ಲೋಕದ ಜನರ ಕಲ್ಯಾಣಕ್ಕಾಗಿ ಸ್ವಾಮೀಜಿಗಳು ಅನುಷ್ಠಾನ, ತಪಸ್ಸು ನಡೆಸುತ್ತಾರೆ ಎಂದು ತೆಲಂಗಾಣದ ತಾಂಡೂರು ಶಾಸಕ ಪೈಲೆಟ್ ರೋಹಿತ್‌ರೆಡ್ಡಿ ಹೇಳಿದರು.
ಇಲ್ಲಿನ ಕಮಲಾವತಿ ನದಿ ತೀರದಲ್ಲಿರುವ ಹಾಲಪಯ್ಯ ಮಠದ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ಶ್ರೀ ಪಂಚಾಕ್ಷರ ಸ್ವಾಮೀಜಿ ಕೈಗೊಂಡಿದ್ದ 16 ದಿನದ ಮೌನಾನುಷ್ಠಾನ, 5 ದಿನದ ಶಿವ ಸಮಾಧಿ ಯೋಗ ಅನುಷ್ಠಾನ ಮಂಗಲೋತ್ಸವದಲ್ಲಿ ಮಾತನಾಡಿದ ಅವರು, ಧರ್ಮದ ತಳಹದಿಯಲ್ಲಿ ಜೀವನ ಸಾಗಿಸಿ ಉತ್ತಮ ಸಮಾಜ ನಿರ್ಮಾಣಕ್ಕೆ ಸ್ವಾಮೀಜಿಗಳ ಮಾರ್ಗದರ್ಶನ ಅಗತ್ಯವಾಗಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಕೊತ್ತಲ ಬಸವೇಶ್ವರ ದೇವಾಲಯದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ಜೀವನದ ಪರಮ ಸತ್ಯ ಮತ್ತು ಪರಮಾನಂದ ಪಡೆಯಲು ಯೋಗ, ಅನುಷ್ಠಾನ, ಸಿದ್ಧಿ ಸಮಾಧಿ ಯೋಗ ಸಹಕಾರಿ. ಅಧಿಕ ಮಾಸದಲ್ಲಿ ತಾಲೂಕಿನಾದ್ಯಂತ ಶಿವಯೋಗದ ಬಿರುಗಾಳಿ ಎದ್ದಿದ್ದು, ಅನೇಕ ಮಠಾಧೀಶರ ಅನುಷ್ಠಾನ ಹೊಸತನ್ನು ಸೃಷ್ಟಿಸಿದೆ ಎಂದರು.
ಭಕ್ತರ ಉದ್ಧಾರಕ್ಕಾಗಿ ನಾನಾ ತಪಸ್ಸು, ಯೋಗ ಸಾಧನೆ ಸ್ವಾಮೀಜಿಗಳು ಮಾಡುತ್ತಾರೆ. ನೀವು ಸ್ವಚ್ಛ ಮನಸ್ಸಿನಿಂದ ಗುರು, ದೇವರಿಗೆ ನಮಿಸುವ ಕಾರ್ಯ ಮಾಡಿದರೆ ಬದುಕು ಹಸನಾಗಲು ಸಾಧ್ಯ ಎಂದು ನುಡಿದರು.
ಮಳಖೇಡ ಕಟ್ಟಿಮನಿ ಸಂಸ್ಥಾನದ ಶ್ರೀ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯರು ಮಾತನಾಡಿದರು. ಶ್ರೀ ಶಿವಶಂಕರ ಶಿವಾಚಾರ್ಯರು, ಡಾ.ರಾಚೋಟೇಶ್ವರ ಶಿವಾಚಾರ್ಯರು, ಶ್ರೀ ಕೊಟ್ಟೂರೇಶ್ವರ ಶಿವಾಚಾರ್ಯರು, ಶ್ರೀ ಅಭಿನವ ಗವಿಸಿದ್ದಲಿಂಗೇಶ್ವರ ಶಿವಾಚಾರ್ಯರು, ಡಾ.ತ್ರಿಮೂರ್ತಿ ಶಿವಾಚಾರ್ಯರು, ವೇ.ಮೂ.ಮಡಿವಾಳಯ್ಯ ಶಾಸ್ತಿç, ತೋಟಗಾರಿಕೆ ಮಹಾ ಮಂಡಳಿ ನಿರ್ದೆಶಕ ಬಸವರಾಜ ಪಾಟೀಲ್, ಪುರವಂತ ರೇವಣಯ್ಯ ಸ್ವಾಮಿ ಕೇಶ್ವಾರ ಇತರರಿದ್ದರು.
ಸ್ವಾಗತ ಸಮಿತಿ ಅಧ್ಯಕ್ಷ ಶಿವಯ್ಯ ಸ್ವಾಮಿ ಬಿಬ್ಬಳ್ಳಿ ಪ್ರಾಸ್ತವಿಕ ಮಾತನಾಡಿದರು. ನಾಗಯ್ಯ ಸ್ವಾಮಿ ಬೊಮ್ನಳ್ಳಿ ಸ್ವಾಗತಿಸಿದರು. ಮಹಿಪಾಲರೆಡ್ಡಿ ಮುನ್ನೂರ ನಿರೂಪಣೆ ಮಾಡಿದರು. ನಂತರ ಶ್ರೀಮಠದ ಭಕ್ತ ಪ್ರಕಾಶ ಕೋಡ್ಲಾ ಹಾಗೂ ನಗರದ ಮಾತೆಯರಿಂದ ಪೂಜ್ಯರ ತುಲಾಭಾರ ನೆರವೇರಿತು. ಬೆಳಗ್ಗೆಯಿಂದಲೇ ಮಠದ ಆವರಣದಲ್ಲಿ ಪೂಜಾ ಕೈಂಕರ್ಯಗಳು ನೆರವೇರಿದವು. ಆಕಾಶವಾಣಿ ಕಲಾವಿದ ವೀರೇಶ ಭಂಟನಹಳ್ಳಿ ಸಂಗೀತ ಸೇವೆ ನಡೆಸಿಕೊಟ್ಟರು. ಅಭಿಷೇಕ ವಿಶ್ವಕರ್ಮ ತಬಲಾ ಸಾಥ್ ನೀಡಿದರು.