

ಬಾಗಲಕೋಟೆ: ಮಕ್ಕಳು ಬೆಳೆಯುವ ಹಂತದಲ್ಲಿಯೇ ಉತ್ತಮ ಆರೋಗ್ಯವಂತರಾಗಿ ಬೆಳೆದಲ್ಲಿ ಮಾತ್ರ ಅವರ ಮುಂದಿನ ಭವಿಷ್ಯ ರೂಪಿಸಲು ಸಾಧ್ಯವಾಗುತ್ತದೆ ಎಂದು ಜಿ.ಪಂ ಸಿಇಒ ಶಶಿಧರ ಕುರೇರ ಹೇಳಿದರು.
ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ತಾಲೂಕಾ ಆಡಳಿತ, ನಗರಸಭೆ ಹಾಗೂ ಶಿಶು ಅಭಿವೃದ್ಧಿ ಯೋಜನೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪೋಷಣ್ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಯಸ್ಸಿನಿಂದಲೇ ಆರೋಗ್ಯಕರ ಆಹಾರ ಪದ್ದತಿ ಮತ್ತು ಪೌಷ್ಠಿಕಾಂಶದ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು.
ಮಕ್ಕಳಲ್ಲಿರುವ ಅಪೌಷ್ಠಿಕತೆಯನ್ನು ತಡೆಯಲು ಸರ್ಕಾರ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ. ಗರ್ಭಿಣಿ, ಬಾಣಂತಿಯರ ನಿರ್ವಹಣೆಗೆ ಸಹ ಸೌಲಭ್ಯಗಳಿದ್ದು, ಅವುಗಳನ್ನು ತಲುಪಿಸುವ ಜವಾಬ್ದಾರಿ ಅಂಗನವಾಡಿ ಕಾರ್ಯಕರ್ತೆಯರದ್ದಾಗಿದೆ. ಮಗು ಹುಟ್ಟುವ ಪೂರ್ವ ಹಾಗೂ ನಂತರದಲ್ಲಿ ಏನು ಕೊಡಬೇಕು ಎಂಬುದನ್ನು ತಿಳಿಯಬೇಕಿದೆ. ಸರ್ಕಾರದ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯವಾಗಬೇಕು. ಅಂದಾಗ ಮಾತ್ರ ಪೋಷಣ ಅಭಿಯಾನದ ಉದ್ದೇಶ ಸಫಲವಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ದಿಡ್ಡಿ ಮಾತನಾಡಿ, ಮುಂದಿನ ಪೀಳಿಗೆಗೆ ಆರೋಗ್ಯಕರ ಭವಿಷ್ಯವನ್ನು ಖಾತ್ರಿಪಡಿಸುವ ಸಲುವಾಗಿ ಉತ್ತಮ ಪೋಷಣೆ ಅತೀ ಅವಶ್ಯವಾಗಿದೆ. ಇದರಿಂದ ಸದೃಢ ಮಕ್ಕಳು, ಸದೃಢ ಭಾರತವನ್ನು ನಿರ್ಮಿಸಲು ಸಾಕಾರವಾಗುತ್ತದೆ. ಅಂಗನವಾಡಿಯಲ್ಲಿ ಮಗುವಿಗೆ ನೀಡುವ ಆಹಾರ ಚಟವಟಿಕೆಗಳು ಅವರ ಆರೋಗ್ಯದ ಮೇಲೆ ಪರಿಣಾಮ ಭೀರುತ್ತದೆ. ಇದರಿಂದ ಸದೃಢರನ್ನಾಗುವಂತೆ ಮಾಡಿ ಅವರ ಭವಿಷ್ಯ ರೂಪಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಜಿ.ಪಂ ಉಪಕಾರ್ಯದರ್ಶಿ ಎನ್.ವೈ.ಬಸರಿಗಿಡದ ಮಾತನಾಡಿ, ಈ ಪೋಷಣ ಅಭಿಯಾನದ ಉದ್ದೇಶ ಮಕ್ಕಳಿಗಾಗಿ, ಹದಿಹರೆಯದ ಹೆಣ್ಣು ಮಕ್ಕಳಿಗಾಗಿ ಕೊಡಬೇಕಾಗಿರುವುದು ಅವಶ್ಯ ಏಕೆಂದರೆ, ಪೌಷಕಾಂಶ ಮಕ್ಕಳ ಬೆಳೆವಣಿಗೆಗೆ ಸಹಕಾರಿಯಾದರೆ ಹದಿಹರೆಯದ ಹೆಣ್ಣು ಮಕ್ಕಳು ಮದುವೆಯಾಗಿ ಮಗುವಿಗೆ ಜನ್ಮ ನಿಡುವ ಸಮಯದಲ್ಲಿ ರಕ್ತಸ್ರಾವದಿಂದ ಬಳಲಬಾರದೆಂಬ ಉದ್ದೇಶದಿಂದ ಸರಕಾರ ಇಂತಹ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕೇವಲ ಕಾರ್ಯಕ್ರಮಕ್ಕೆ ಸೀಮಿತವಾಗಿರದೇ ನಿರಂತರ ಈ ಕಾರ್ಯ ಮುಂದುವರೆಯಬೇಕಾಗಿದೆ ಎಂದು ತಿಳಿಸಿದರು.
ವಿಷಯ ತಜ್ಞೆ ಡಾ.ರಮೀತ ಬಿ.ಇ ಮಾತನಾಡಿ, ಗರ್ಭಾವಸ್ಥ ಮಹಿಳೆಗೆ ಪೌಷ್ಠಿಕ ಆಹಾರದ ಅವಶ್ಯಕತೆ ಇದ್ದು, ಮನೆಯಲ್ಲಿ ಉಪಯುಕ್ತವಾಗ ಪದಾರ್ಥಗಳನ್ನು ಬಳಸಿಕೊಂಡು ನಿಯಮಿತ ಸಮಯದಲ್ಲಿ ಸೇವಿಸುತ್ತಾ ಬಂದಲ್ಲಿ ಮಗುವಿನ ಜೊತೆಗೆ ತಾಯಿಯು ಸಹ ಆರೋಗ್ಯದಿಂದಿರಲು ಸಾಧ್ಯವಾಗುತ್ತದೆ. ಕಲಬೆರಕೆ ಆಹಾರ, ವಿಶ್ರಾಂತಿ ರಹಿತ ಜೀವನ ಇವುಗಳಿಂದ ಅಶಕ್ತತೆ ಉಂಟಾಗುವುದು. ಜಾಹೀರಾತುಗಳಿಗೆ ಮಾರು ಹೋಗಿ ರಾಸಾಯನಿಕ ಯುಕ್ತ ಔಷಗಳನ್ನು ಸೇವಿಸುವುದು ಕೂಡಾ ಒಳ್ಳೆಯದಲ್ಲ ಎಂದರು.
ಈ ಸಂದರ್ಭದಲ್ಲಿ ೫ ಜನ ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ.ಪ್ರಭಾಕರ, ನಿರೂಪನಾಧಿಕಾರಿ ಮಂಜುನಾಥ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಮೇಶ ಸೂಳಿಕೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಪೂರ್ವದಲ್ಲಿ ವಿವಿಧ ಪೌಷ್ಠಿಕ ಆಹಾರ ಪದಾರ್ಥಗಳ ಪ್ರದರ್ಶ ಮಾಡಲಾಯಿತು.