ಸಮಾಜಕ್ಕೆ ಆದರ್ಶ ಶಿಕ್ಷಕರು ಅಗತ್ಯ

9 vikram 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಮಾಜದಲ್ಲಿ ಅನೇಕ ಜನಪ್ರಿಯ ಶಿಕ್ಷಕರು ಸಿಗುತ್ತಾರೆ. ಸರಿಯಾಗಿ ಪಾಠ ಮಾಡಲು ಬಾರದಿದ್ದರೂ ಗಿಮಿಕ್‌ಗಳಿಂದ ವಿದ್ಯಾರ್ಥಿಗಳನ್ನು ತಮ್ಮತ್ತ ಸೆಳೆಯುವ ಶಿಕ್ಷಕರನ್ನು ನಾವಿಂದು ಸಮಾಜದಲ್ಲಿ ಕಾಣಬಹುದಾಗಿದೆ. ಆದರೆ ನಮಗೆ ನಿಜವಾಗಿ ಬೇಕಿರುವುದು ಆದರ್ಶ ಶಿಕ್ಷಕರೆ ಹೊರತು ಜನಪ್ರಿಯ ಶಿಕ್ಷಕರಲ್ಲ ಎಂದು ಕವಿವಿ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಶೌಕತ್ ಅಜೀಂ ಹೇಳಿದರು.
ಇಲ್ಲಿನ ವಿದ್ಯಾಗಿರಿಯ ಪ್ರೇರಣಾ ಸಭಾಭವನದಲ್ಲಿ ಗುರುವಾರ ಏರ್ಪಡಿಸಿದ್ದ ಜೆಎಸ್‌ಎಸ್‌ನ ಶ್ರೀ ಮಂಜುನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯದ ವಾರ್ಷಿಕ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಹಿಂದೆ ಗುರು, ಮುಂದೆ ಗುರಿ ಇರಬೇಕು ಎಂಬ ಮಾತು ಸದಾ ಗುರುವಿನ ಮೇಲಿನ ನಂಬಿಕೆ ತೋರುತ್ತದೆ. ಗುರು ಎಂಬ ಪದ, ಆ ವ್ಯಕ್ತಿತ್ವಕ್ಕೆ ಸಮಾಜದಲ್ಲಿರುವ ಪ್ರಾಮುಖ್ಯತೆ ಬಹುಶಃ ಬೇರೆ ಯಾವ ವ್ಯಕ್ತಿಗೂ ಇಲ್ಲ. ಅದನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ಪ್ರತಿಯೊಬ್ಬ ಶಿಕ್ಷಕರದ್ದಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ. ಪಿ.ಬಿ.ಬಾಗೇವಾಡಿ ಅಧ್ಯಕ್ಷತೆ ವಹಿಸಿದ್ದರು. ಕಾವೇರಿ ಕುರಹಟ್ಟಿ, ಡಾ. ಸೋಮಶೇಖರ ಹೂಗಾರ, ಕೃಷ್ಣ ಲಮಾಣಿ, ಅಕ್ಷತಾ ಬೈಲೂರಕರ, ಲತಾ ತೋರಣಗಟ್ಟಿ, ವಿಜಯ ಹುಲಮನಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net