ಸಮಾಜಕ್ಕಾಗಿ ರಾಜಕೀಯ ತ್ಯಾಗಕ್ಕೂ ಸಿದ್ದ

download
ಶಾಸಕ ವಿಜಯಾನಂದ ಕಾಶಪ್ಪನವರ
Published on

ಬಾಗಲಕೋಟೆ: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ವಿಚಾರವಾಗಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಅವರ ಹೆಸರು ಹೇಳದೇ ಪರೋಕ್ಷವಾಗಿ ತಿರುಗೇಟು ಕೊಟ್ಟಿದ್ದಾರೆ.

ಇಳಕಲ್ಲ ನಗರದಲ್ಲಿ ಬುಧವಾರ ರಾತ್ರಿ ೨ಎ ಮೀಸಲಾತಿಗಾಗಿ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಆರಂಭಿಸಿರುವ ಶಾಸಕರ ಮನೆಯಲ್ಲಿ ಪಂಚಮಸಾಲಿಗಳ ಹಕ್ಕೊತ್ತಾಯದ ಆಗ್ರಹ ಪತ್ರವನ್ನು ಸ್ವೀಕರಿಸಿದ ಮಾತನಾಡಿದರು.

ಮೀಸಲಾತಿ ವಿಚಾರವಾಗಿ ಶೀಘ್ರವೇ ಕಾನೂನು ತಜ್ಞರ ಸಲಹೆ ಪಡೆದು ನಿರ್ಣಯ ಕೈಗೊಳ್ಳುವಂತೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕುತ್ತೇವೆ. ಈ ವಿಚಾರವಾಗಿ ನಮ್ಮ ಬಗ್ಗೆ ಮಾತನಾಡುವವರ, ಟೀಕೆ ಟಿಪ್ಪಣಿಗಳಿಗೆ ಸಮಾಜ ಬಾಂಧವರು ಒಳಗಾಗಬಾರದು ಎಂದು ಯತ್ನಾಳ್ ಹೆಸರು ಹೇಳದೇ ಟಾಂಗ್ ಕೊಟ್ಟರು.

ಪಂಚಮಸಾಲಿ ಮೀಸಲಾತಿಗಾಗಿ ಪಾದಯಾತ್ರೆ ಮಾಡಿದ್ದು ನಾವು. ಅನೇಕರು ಅದರಲ್ಲಿ ಭಾಗವಹಿಸಿರಬಹುದು. ಆದರೆ, ಅವರು ನಮ್ಮ ಜೊತೆಗೆ ನಡೆದಿಲ್ಲ. ಸಭೆ ಸಮಾರಂಭಗಳಲ್ಲಿ ಭಾಗವಹಿಸಿದ ತಕ್ಷಣ ತಾವೇ ಮುಂಚೂಣಿಯಲ್ಲಿದ್ದೇವೆ, ನಾವೇ ನಮ್ಮ ಸರ್ಕಾರದಲ್ಲಿ ಮೀಸಲಾತಿ ಕೊಡಿಸಿದ್ದೇವೆ ಎನ್ನುತ್ತಾರೆ. ೨ ಡಿ ಕೊಡಿಸಿದ್ದೇವೆ ಎನ್ನುತ್ತಾರಲ್ಲ, ಎಲ್ಲಿ ಕೊಡೆಸಿದ್ದಾರೆ? ಯಾವ ತಹಶೀಲ್ದಾರ್ ಕಚೇರಿಯಲ್ಲಿ ನಮ್ಮ ಮಕ್ಕಳಿಗೆ ಆ ಸುತ್ತೋಲೆ ಕೈಗೆ ಸಿಕ್ಕಿದೆ? ಸುಮ್ಮನೆ ಭಾಷಣ ಮಾಡಿ ಟೀಕೆ ಮಾಡುತ್ತಾರೆ. ನಮ್ಮ ಧರ್ಮದ ಬಗ್ಗೆಯೆ ಅವರು ಟೀಕೆ ಮಾಡುತ್ತಾರೆ. ಅಂತವರು ಬಹಳ ಜನ ಇದ್ದಾರೆ. ಅವರನ್ನು ನಾವು ಲೆಕ್ಕಕ್ಕೆ ಹಾಕಲ್ಲ. ಏನೇ ಮಾತನಾಡಿದರೂ ಅದನ್ನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಶಾಸಕ ಯತ್ನಾಳ್ ಗೆ ತಿವಿದರು.

ನಮ್ಮ ಹೋರಾಟ ನಮ್ಮ ಸಮುದಾಯಕ್ಕೆ ಮೀಸಲಾತಿ ಆದೇಶ ಪತ್ರ ನಮ್ಮ ಮಕ್ಕಳ ಕೈಗೆ ಬರುವವರೆಗೂ ನಿಲ್ಲಲ್ಲ. ನನಗೆ ಅಧಿಕಾರ ಬಂದರೂ, ಬರದೇ ಇದ್ದರೂ ಅಷ್ಟೆ. ಸಂದರ್ಭ ಬಂದರೆ ರಾಜಕೀಯ ತ್ಯಾಗ ಮಾಡುತ್ತೇನೆ ಎಂದು ಈ ಹಿಂದೆಯೇ ಹೇಳಿದ್ದೇನೆ. ಅದರಂತೆ ನಡೆಯುವವರು ನಾವು. ಬರೀ ನಾಟಕೀಯವಾಗಿ ಭಾಷಣ ಮಾಡಿ, ನಾಟಕೀಯವಾದ ಚಪ್ಪಾಳೆ ತಟ್ಟಿಸಿಕೊಳ್ಳುವ ವ್ಯಕ್ತಿತ್ವ ನಮ್ಮದಲ್ಲ. ಇದು ನಮ್ಮ ಬಗ್ಗೆ ಯಾರು ಮಾತನಾಡಿದ್ದಾರೋ ಅವರಿಗೆ ಹೇಳಿದ್ದು ಎಂದು ಯತ್ನಾಳ್ ಹೆಸರು ಹೇಳದಯೇ ಟಾಂಗ್ ಕೊಟ್ಟರು.

ನಮ್ಮ ಪೂಜ್ಯರ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಿದ್ದೇವೆ. ಈ ಶ್ರೀಗಳು ಕೊಟ್ಟಿರುವ ಹಕ್ಕೊತ್ತಾಯ ಪತ್ರವನ್ನು ಪಾಲಿಸುತ್ತೇವೆ. ಈ ಬಗ್ಗೆ ಸಿಎಂ ಮೇಲೆ ಒತ್ತಡ ಹಾಕುತ್ತೇವೆ ಎಂದು ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು. ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net