

ಕಲಬುರಗಿ: ಸಮಾಜಕ್ಕಾಗಿ ಬದುಕಿ ಜೀವನ ಸಾಧಿಸುವವರು ಶ್ರೇಷ್ಠತೆಯ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರಿಗೆ ಸಲ್ಲುವ ಪ್ರಶಸ್ತಿಗಳಿಂದ ಪ್ರಶಸ್ತಿಗಳಿಗೆ ಘನತೆ ಬರುತ್ತದೆ ಎಂದು ಜಗದ್ಗುರು ಶ್ರೀ ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಎಸ್.ಪಿ. ಎಸ್.ಬಸವರಾಜ ಅವರಿಗೆ ಶ್ರೀ ತ್ಯಾಗವೀರ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಭಕ್ತರಿಗೆ ಮಠ ಮಾನ್ಯಗಳು ಸನ್ಮಾರ್ಗ ತೋರುತ್ತಿದ್ದು, ಭಕ್ತರು ಮಠ ಮಾನ್ಯಗಳನ್ನು ಬೆಳೆಸುತ್ತಿದ್ದಾರೆ. ಗುರು ಶಿಷ್ಯ ಪರಂಪರೆಯೊಂದಿಗೆ ಸಮಾಜದಲ್ಲಿ ಸೇವಾ ಭಾವ ಮೂಡಿದಾಗ ಮಾತ್ರ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಸಹಕಾರಿ ಆಗಲಿದೆ ಎಂದು ಹೇಳಿದರು.
ಎಸ್.ಬಸವರಾಜ ಅವರು ಶ್ರೀಮಠ, ಮಾನ್ಯಗಳ ಬಗ್ಗೆ ಅಪಾರ ಗೌರವ ನೀಡುವ ಜತೆಗೆ ಅಭಿವೃದ್ಧಿಗೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ೮೨ ವರ್ಷದ ಬಸವರಾಜ ಅವರ ಸೇವೆ ಗುರುತಿಸಿ, ೧.೫ ಲಕ್ಷ ರೂ. ಮೌಲ್ಯದ ಬೆಳ್ಳಿ ಮೂರ್ತಿಯನ್ನು ಸಿದ್ಧಪಡಿಸಿ, ಪ್ರಶಸ್ತಿ ಪ್ರದಾನ ಮಾಡಿದ್ದು, ಖುಷಿಯ ಜತೆಗೆ ಸೂಕ್ತ ವ್ಯಕ್ತಿಗೆ ಸಂದ ಗೌರವ ಎಂದು ಬಣ್ಣಿಸಿದರು.
ಚಿಂಚನಸೂರದ ಶ್ರೀ ಚನ್ನಮಲ್ಲ ಶಿವಾಚಾರ್ಯರು, ಸೊನ್ನದ ಶ್ರೀ ಶಿವಾನಂದ ಸ್ವಾಮೀಜಿ ಉಪಸ್ಥಿತರರಿದ್ದರು.