ಸಮಾಜಕಲ್ಯಾಣ ಇಲಾಖೆ ಹಾಸ್ಟೆಲ್‌ಗಳಿಗೆ ಮುಂಚಿನಂತೆ ಪ್ರವೇಶ

CTD --0000 5
Published on


ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ
ಮೆಟ್ರಿಕ್ ಪೂರ್ವ ಹಾಗೂ ನಂತರದ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಪ್ರಸ್ತುತ ಜಾರಿಯಲ್ಲಿರುವ ರಾಜ್ಯ ವಿದ್ಯಾರ್ಥಿನಿಲಯ ತಂತ್ರಾಂಶಕ್ಕೆ ಗುಡ್‌ಬೈ ಹೇಳಿ ಪ್ರಸಕ್ತ ಸಾಲಿನಿಂದ ಈ ಮೊದಲಿನ ಎಚ್‌ಎಂಐಎಸ್ ಅಡಿ ಪ್ರವೇಶ ಕಲ್ಪಿಸಲು ಸಮಾಜ ಕಲ್ಯಾಣ ಇಲಾಖೆ ಮುಂದಾಗಿದೆ.
2021-22 ರವರೆಗೆ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಹಾಸ್ಟೆಲ್‌ಗಳಿಗೆ ಹಾಸ್ಟೆಲ್ ಮ್ಯಾನೇಜ್‌ಮೆಂಟ್ ಇನ್ಫರ್ಮೇಷನ್ ಸಿಸ್ಟಮ್(ಎಚ್‌ಎಂಐಎಸ್)ಮೂಲಕ ಪ್ರವೇಶ ಕಲ್ಪಿಸಲಾಗುತ್ತಿತ್ತು.
2022-23 ನೇ ಸಾಲಿನಲ್ಲಿ ಈ ಪ್ರಕ್ರಿಯೆಯನ್ನು ರಾಜ್ಯ ವಿದ್ಯಾರ್ಥಿ ನಿಲಯ ತಂತ್ರಾಂಶದ (ಎಸ್‌ಎಚ್‌ಪಿ) ಮುಖಾಂತರ ನಿರ್ವಹಿಸಲಾಗುತ್ತಿತ್ತು. ಇದರಿಂದ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಪ್ರವೇಶ ದೊರಕುತ್ತಿರಲಿಲ್ಲ. ಇಡೀ ಹಂಚಿಕೆ ಪ್ರಕ್ರಿಯೆಯನ್ನು ರಾಜ್ಯಮಟ್ಟದಿಂದಲೇ ನಿರ್ವಹಿಸುತ್ತಿದ್ದರಿಂದ, ತಾಲೂಕು ಮಟ್ಟದ ಸಮಸ್ಯೆಗಳಿಗೆ ಸಕಾಲದಲ್ಲಿ ಪರಿಹಾರ ಸಿಗುತ್ತಿರಲಿಲ್ಲ.
ತಾಲೂಕು, ಜಿಲ್ಲೆ ಮತ್ತು ರಾಜ್ಯಮಟ್ಟದ ಅಧಿಕಾರಿಗಳ ಲಾಗಿನ್‌ನಲ್ಲಿ ಲಭ್ಯವಾಗುತ್ತಿರುವ ಹಾಸ್ಟೆಲ್ ಮ್ಯಾನೇಜ್‌ಮೆಂಟ್ ಇನ್ಫರ್ಮೇಷನ್ ಸಿಸ್ಟಮ್ ಹಾಗೂ ರಾಜ್ಯವಿದ್ಯಾರ್ಥಿ ನಿಲಯ ತಂತ್ರಾಂಶದ ವರದಿಗಳು, ಒಂದಕ್ಕೊಂದು ತಾಳೆ ಆಗುತ್ತಿರಲಿಲ್ಲ. ಈ ಲೋಪವನ್ನು ಇಲಾಖೆ ಗಮನಕ್ಕೆ ತಂದಿದ್ದ ವಿವಿಧ ಜಿಲ್ಲೆಗಳ ಉಪ ನಿರ್ದೇಶಕರು, ಮೊದಲಿನ ಪದ್ಧತಿ ಜಾರಿಗೆ ಮನವಿ ಮಾಡಿದ್ದರು.
ಸಹಾಯಕ ನಿರ್ದೇಶಕರಿಗೆ ಹೊಣೆ
ಹಾಸ್ಟೆಲ್‌ಗಳಲ್ಲಿ ಅರ್ಹರಿಗೆ ಪ್ರವೇಶ ಕಲ್ಪಿಸುವ ಹೊಣೆ ಈಗ ಇಲಾಖೆಯ ತಾಲೂಕು ಮಟ್ಟದ ಸಹಾಯಕ ನಿರ್ದೇಶಕರ ಹೆಗಲೇರಿದೆ. ಪ್ರವೇಶಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿಲಯಗಳ ಪಟ್ಟಿ, ಸೀಟು ಲಭ್ಯತೆ ಸಂಖ್ಯೆ ಹಾಗೂ ವಾರ್ಡನ್ ದೂರವಾಣಿ ಸಂಖ್ಯೆಯನ್ನು ಇಲಾಖೆ ಜಾಲತಾಣದಲ್ಲಿ ಸದಾಕಾಲ ಪ್ರದರ್ಶಿಸಬೇಕಿದೆ. ಜಿಲ್ಲಾ/ತಾಲೂಕು ಮಟ್ಟದಲ್ಲಿ ಲಾಗಿನ್ ಸೃಜಿಸಿಕೊಂಡು ಪ್ರವೇಶ ಪ್ರಕ್ರಿಯೆಯನ್ನು ಸುಗಮವಾಗಿ ನಿರ್ವಹಿಸಬೇಕಿದೆ.
ಇಲಾಖೆ ವ್ಯಾಪ್ತಿಯಲ್ಲಿ ಮೆಟ್ರಿಕ್‌ಪೂರ್ವ- 1231,ಮೆಟ್ರಿಕ್ ನಂತರದ 671 ಹಾಸ್ಟೆಲ್‌ಗಳಿವೆ. ಮೆಟ್ರಿಕ್‌ಪೂರ್ವ ಹಾಸ್ಟೆಲ್‌ಗಳಲ್ಲಿ 91489 ಹಾಗೂ ಮೆಟ್ರಿಕ್ ನಂತರದ ಹಾಸ್ಟೆಲ್‌ಗಳಲ್ಲಿ 72936 ಸೀಟು ಸಾಮರ್ಥ್ಯವಿದೆ. ಆದರೆ ಕಳೆದ ವರ್ಷ ಮೆಟ್ರಿಕ್ ನಂತರದ ಹಾಸ್ಟೆಲ್‌ಗಳಲ್ಲಿ ಸೀಟು ಸಾಮರ್ಥ್ಯ ಮೀರಿ 105631 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ par ಕಲ್ಪಿಸಲಾಗಿದೆ.----

ಹಾಸ್ಟೆಲ್ ವಿವರ
ಹಾಸ್ಟೆಲ್-ಹಾಸ್ಟೆಲ್‌ಗಳ ಸಂಖ್ಯೆ-ಸೀಟು ಸಂಖ್ಯೆ
ಮೆಟ್ರಿಕ್‌ಪೂರ್ವ(ಬಾಲಕರು)930-68663
ಮೆಟ್ರಿಕ್‌ಪೂರ್ವ(ಬಾಲಕಿಯರು)-301-22826
ಮೆಟ್ರಿಕ್‌ನಂತರ(ಬಾಲಕರು)-394-45118
ಮೆಟ್ರಿಕ್‌ನಂತರ(ಬಾಲಕಿಯರು)-277-27818
ಕೋಟ್
ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಮೊದಲಿದ್ದಂತೆ ತಾಲೂಕಿನ ಸಹಾಯಕ ನಿರ್ದೇಶಕರ ಹಂತದಲ್ಲಿ ಹಾಸ್ಟೆಲ್‌ಗಳ ಪ್ರವೇಶ ಪ್ರಕ್ರಿಯೆ ನಡೆಯ ಲಿದೆ. ಎಸ್‌ಸಿ,ಎಸ್‌ಸಿ ಹಾಗೂ ಶೇ.25 ಪ್ರಮಾಣದಲ್ಲಿ ಒಬಿಸಿ ವರ್ಗದ ವಿದ್ಯಾರ್ಥಿಗಳಿಗೆ ನಿಯಮಗಳಾನುಸಾರ ಪ್ರವೇಶ ಕಲ್ಪಿಸಲಾಗುತ್ತದೆ.
ಜಗದೀಶ್ ಹೆಬ್ಬಳ್ಳಿ, ಜಂಟಿ ನಿರ್ದೇಶಕರು,ಸಮಾಜ ಕಲ್ಯಾಣ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net