ಸಮಾಜ ಹಾಳು ಮಾಡುವ ವ್ಯಸನ

Jambagi
ಔರಾದ್ ತಾಲೂಕಿನ ಜಂಬಗಿಯಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಪ್ರಕಾಶ ಬನಸೋಡೆ, ಹಾಜಿ ಹುಸೇನ್‌ಸಾಬ್ ಯಾದವಾಡ, ಅಭಿನಯ, ಅಬಕಾರಿ ಉಪ ಆಯುಕ್ತ ರವಿಶಂಕರ ಎ., ಜಿ.ಡಿ. ಶ್ರೀಮಾಳೆ, ಸಂದೀಪ ಮೇತ್ರೆ ಇತರರಿದ್ದರು.
Published on

ಔರಾದ್: ಮದ್ಯ ಮತ್ತು ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯದ ಮೇಲೆ ಹಾನಿ ಉಂಟಾಗುತ್ತದೆ. ವ್ಯಸನ ಸಂಸಾರ ಮತ್ತು ಸಮಾಜವನ್ನು ಹಾಳು ಮಾಡುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಪ್ರಕಾಶ ಬನಸೋಡೆ ಹೇಳಿದರು.

ತಾಲೂಕಿನ ಜಂಬಗಿ ಗ್ರಾಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ರಾಜ್ಯ ಮದ್ಯಪಾನ ಸಂಯಮ ಮಂಡಳಿ ಹಾಗೂ ಅಬಕಾರಿ ಇಲಾಖೆ ವತಿಯಿಂದ ಗುರುವಾರ ಆಯೋಜಿಸಿದ್ದ ಮದ್ಯಪಾನ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮ ಕುರಿತ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿದ ಅವರು, ವಿದ್ಯಾರ್ಥಿಗಳು ಸಿಗರೇಟ್, ತಂಬಾಕು, ಮದ್ಯಪಾನ ಸೇರಿದಂತೆ ಮಾದಕ ವಸ್ತುಗಳಿಂದ ದೂರ ಉಳಿಯಬೇಕು. ಹವ್ಯಾಸ ಚಟವಾಗಿ ಪರಿವರ್ತನೆಗೊಂಡರೆ ಜೀವನವನ್ನು ಬಲಿ ತೆಗೆದುಕೊಳ್ಳುತ್ತದೆ ಎಂಬ ಎಚ್ಚರಿಕೆ ಇರಬೇಕು ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶ ಹಾಜಿ ಹುಸೇನ್‌ಸಾಬ್ ಯಾದವಾಡ ಮಾತನಾಡಿ, ೧೫ರಿಂದ ೩೫ ವರ್ಷದೊಳಗಿನ ಯುವ ಸಮೂಹ ಮಾದಕ ವಸ್ತುಗಳಂಥ ಚಟಗಳಿಗೆ ಹೆಚ್ಚಾಗಿ ಮಾರು ಹೋಗುತ್ತಾರೆ. ಸುತ್ತಲಿನ ಪರಿಸರ, ಮೋಜು ಸೇರಿದಂತೆ ಇತರ ನೆಪದಲ್ಲಿಯೂ ಕುಡಿತಕ್ಕೆ ದಾಸರಾಗುತ್ತಾರೆ. ಮದ್ಯದಿಂದ ದೈಹಿಕ, ಮಾನಸಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿಯೂ ನಷ್ಟ ಅನುಭವಿಸಬೇಕಾಗುತ್ತದೆ. ಧೂಮಪಾನ ಮತ್ತು ಗುಟ್ಕಾದಿಂದ ದೇಹಕ್ಕೆ ಹಾನಿಯಿದೆ. ಯೋಗ, ವ್ಯಾಯಾಮ, ಸಂಗೀತ ಕೇಳುವುದು, ಚಿತ್ರ ಬಿಡಿಸುವುದು, ಹಾಡುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದರು.

ಅಬಕಾರಿ ಉಪ ಆಯುಕ್ತ ರವಿಶಂಕರ ಎ. ಮಾತನಾಡಿದರು. ಸಿವಿಲ್ ನ್ಯಾಯಧೀಶ ಅಭಿನಯ, ನ್ಯಾಯವಾದಿ ಜಿ.ಡಿ. ಶ್ರೀಮಾಳೆ, ತಾಲೂಕು ನ್ಯಾಯವಾದಿ ಸಂಘದ ಅಧ್ಯಕ್ಷ ಸಂದೀಪ್ ಮೇತ್ರೆ, ಶಬ್ಬೀರ್ ಬಿರಾದಾರ್, ವಿಠ್ಠಲ್ ವಾಲಿ, ವಿಶ್ವನಾಥ ಸ್ವಾಮಿ, ಅರ್ಜುನ ಭೋಸ್ಲೆ, ಅನಿಲ ವಿಠ್ಠಲ್ ಇತರರಿದ್ದರು.

ಮಾದಕ ವಸ್ತುಗಳನ್ನು ಹೊಂದುವುದು, ಅದನ್ನು ಸಾಗಾಟ ಮತ್ತು ಮಾರಾಟ ಮಾಡುವುದು ಅಪರಾಧ. ಅದಕ್ಕೆ ಕಠಿಣ ಶಿಕ್ಷೆ ಇದೆ. ಮಾದಕ ವಸ್ತುಗಳ ಸೇವನೆಯಿಂದ ಸಮಾಜದಲ್ಲಿ ಗೌರವ ಕಳೆದುಕೊಳ್ಳುತ್ತಾರೆ ಮತ್ತು ಆರ್ಥಿಕವಾಗಿ ನಷ್ಟ ಅನುಭವಿಸುತ್ತಾರೆ. ಯುವಕರು ದುಶ್ಚಟಗಳಿಗೆ ಬಲಿಯಾಗಬಾರದು.

| ರವಿಶಂಕರ ಎ. ಅಬಕಾರಿ ಉಪ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net