

ಬೇಲೂರು: ರೋಟರಿ ಸಂಸ್ಥೆ ಸದಸ್ಯರು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಸಂಸ್ಥೆಯನ್ನು ಬೆಳೆಸಬೇಕು ಎಂದು ರೋಟರಿ ಮಾಜಿ ಸಹಾಯಕ ಪ್ರಾಂತಪಾಲ ವಲಯ 9ರ ಡಾ.ಸುಧೀರ್ ಸಲಹೆ ನೀಡಿದರು.
ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ರೋಟರಿ ಸಂಸ್ಥೆಯು ವಿಶ್ವದ ಸಮಾಜ ಸೇವಾ ಸಂಸ್ಥೆಗಳಲ್ಲಿ ಒಂದಾಗಿದ್ದು, ಹಲವು ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಜನ ಮನ್ನಣೆ ಗಳಿಸಿದೆ. ಬೇಲೂರಿನ ರೋಟರಿ ಸಂಸ್ಥೆ ಹಲವು ಹೊಸತನದ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯವಾಗಿದೆ. ಸಂಸ್ಥೆಯಲ್ಲಿ ಅಧ್ಯಕ್ಷರ ಅವಧಿ 1 ವರ್ಷ ಸೀಮಿತವಾಗಿದ್ದರಿಂದ ಹಾಕಿಕೊಂಡಿರುವ ಯೋಜನೆಗಳನ್ನು ಸಂಪೂರ್ಣ ಸಾಕಾರಗೊಳಿಸಲು ಕಷ್ಟವಾಗಬಹುದು. ಹಾಗಾಗಿ ಈಗಲೇ ಎಲ್ಲ ಪದಾಧಿಕಾರಿಗಳು ಹಾಗೂ ಸದಸ್ಯರು ಚರ್ಚಿಸಿ ಮುಂದಿನ ವರ್ಷಕ್ಕೆ ಆಗುವಷ್ಟು ಯೋಜನೆ ರೂಪಿಸಿದಾಗ ಮಾತ್ರ ಕಾರ್ಯಕ್ರಮಗಳು ಯಶಸ್ವಿಯಾಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ನೂತನ ಅಧ್ಯಕ್ಷ ಎಚ್.ಜಿ.ಚಿದನ್ ಮಾತನಾಡಿ, ನಮ್ಮ ಅಧಿಕಾರದ ಅವಧಿಯಲ್ಲಿ ಸಂಸ್ಥೆಗೆ ಯಾವುದೇ ಧಕ್ಕೆಯಾಗದಂತೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೇನೆ. ಶಾಲಾ, ಕಾಲೇಜು ವಿದ್ಯಾರ್ಥಿಗಳ, ಮಹಿಳೆಯರ ಸಬಲೀಕರಣ, ಆರೋಗ್ಯ, ಶಿಕ್ಷಣ, ಪರಿಸರ ಸೇರಿದಂತೆ ಎಲ್ಲ ವಲಯಕ್ಕೂ ಆದ್ಯತೆ ನೀಡುವ ನಿಟ್ಟಿನಲ್ಲಿ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರೊಂದಿಗೆ ಚರ್ಚಿಸಿ ಸಲಹೆ, ಸಹಕಾರ ಪಡೆದು ಸಂಸ್ಥೆಯ ಏಳಿಗೆಗೆ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ಸಮಾರಂಭದಲ್ಲಿ ಮಾತನಾಡಿದ ತಹಸೀಲ್ದಾರ್ ಎಂ.ಮಮತಾ, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು ಮನುಕುಲದ ಏಳಿಗೆಗೆ ಕೊಡುಗೆ ನೀಡುತ್ತಿರುವ ರೋಟರಿ ಕ್ಲಬ್‌ನ ಸೇವಾ ಕಾರ್ಯ ಅನನ್ಯವಾಗಿದೆ. ಪ್ರತಿಯೊಂದು ಯುಗದಲ್ಲಿಯೂ ಅಸಮತೋಲನ ಸೃಷ್ಟಿಯಾದಾಗ ಭಗವಂತ ಅವತರಿಸಿ ಲೋಕದಲ್ಲಿ ಶಾಂತಿ ನೆಮ್ಮದಿ ನೆಲೆಗೊಳಿಸಿದ್ದಾನೆ. ಅದರಂತೆ ಈ ಕಾಲ ಮಾನದಲ್ಲಿ ರೋಟರಿ ಜಗದಗಲ ಹಬ್ಬಿ ಮಾನವೀಯ ಸೇವೆಯಲ್ಲಿ ತೊಡಗಿ ಶಾಂತಿಗಾಗಿ ಶ್ರಮಿಸುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಅಧ್ಯಕ್ಷರಾಗಿ ಎಚ್.ಜಿ.ಚಿದನ್, ಕಾರ್ಯದರ್ಶಿಯಾಗಿ ಎನ್.ಶಂಭುಗೌಡ ಅಧಿಕಾರ ಸ್ವೀಕರಿಸಿದರು. ಯುಪಿಎಸ್‌ಸಿ ಪರೀಕ್ಷೆಯಲ್ಲಿ 210ನೇ ರಾಕ್ ಪಡೆದ ತಾಲೂಕಿನ ಎ.ಎಲ್.ಅಶೋಕ್ ಹಾಗೂ ಎಸ್‌ಎಸ್‌ಎಲ್‌ಸಿ, ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ರೋಟರಿ ಸಹಾಯಕ ಪ್ರಾಂತಪಾಲ ವಿನೋದ್ ಕುಮಾರ್‌ಶೆಟ್ಟಿ, ಜೋನಲ್ ಲೆಪ್ಟಿನೆಂಟ್ ಕೆ.ಕೆ.ಸಂದೀಪ್, ಮಾಜಿ ಅಧ್ಯಕ್ಷರಾದ ಲೋಕೇಶ್, ಸಿದ್ದೇಗೌಡ ಸೇರಿದಂತೆ ಇತರರು ಇದ್ದರು.