ಸಮಾಜ ಸೇವೆಯಿಂದ ಆತ್ಮತೃಪ್ತಿ

7 skpp 1
Published on

ಸಕಲೇಶಪುರ: ಸಮಾಜ ಸೇವೆಯಿಂದ ಆತ್ಮತೃಪ್ತಿ ದೊರೆಯಲಿದೆ ಎಂದು ಲಯನ್ಸ್ ಪ್ರಾಂತಪಾಲ ಸಂಜೀತ್ ಶೆಟ್ಟಿ ಹೇಳಿದರು.
ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಲಯನ್ಸ್ ಸಂಸ್ಥೆಯಿಂದ ನಿರ್ಮಾಣಗೊಂಡಿರುವ 10 ಡಯಾಲಿಸೀಸ್ ಬೆಡ್ ಹೊಂದಿರುವ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದರು.


ಏಕವ್ಯಕ್ತಿಗಿಂತ ಸಮೂಹದ ಮೂಲಕ ಮಾಡುವ ಸೇವೆ ಹೆಚ್ಚು ಜನರಿಗೆ ತಲುಪಲಿದೆ. ಲಯನ್ಸ್ ಸಂಸ್ಥೆ ಪ್ರತಿ ವರ್ಷ ಒಂದೊಂದು ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದು, ಈ ಬಾರಿ ಆರೋಗ್ಯ, ಪ್ರಕೃತಿ ಉಳಿಸುವ ನಿಟ್ಟಿನಲ್ಲಿ ಹೆಚ್ಚಿನ ಕೆಲಸ ಮಾಡುತ್ತಿದೆ. ಪಟ್ಟಣದಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಸುಸಜ್ಜಿತ ರುದ್ರಭೂಮಿಯನ್ನು ಸಮಾಜಕ್ಕೆ ಕೊಡುಗೆಯನ್ನಾಗಿ ನೀಡಲಾಗಿದೆ. ತಾಲೂಕು ಆಸ್ಪತ್ರೆಯಲ್ಲಿ ಕೇವಲ 2 ಡಯಾಲಿಸೀಸ್ ಬೆಡ್‌ಗಳಿದ್ದು ಹೆಚ್ಚಿನ ರೋಗಿಗಳು ಹಾಸನ ಅಥವಾ ಖಾಸಗಿ ಆಸ್ಪತ್ರೆಗಳ ಮೊರೆಹೋಗಬೇಕಿತ್ತು. ಇದನ್ನು ಮನಗಂಡು ಸುಸಜ್ಜಿತ 10 ಬೆಡ್‌ಗಳ ಹೊಂದಿರುವ ಡಯಾಲಿಸೀಸ್ ಕೇಂದ್ರವನ್ನು ಆಸ್ಪತ್ರೆಗೆ ಕೊಡುಗೆಯಾಗಿ ನೀಡಲಾಗಿದೆ ಎಂದರು.


ತಾಲೂಕು ವೈದ್ಯಾಧಿಕಾರಿ ಡಾ.ಅರುಣ್ ಮಾತನಾಡಿ, ಸಮಾಜಮುಖಿ ಸಂಘ ಸಂಸ್ಥೆಗಳು ಇಂದು ಸಮಾಜಕ್ಕೆ ಹೆಚ್ಚಿನ ಅಗತ್ಯವಿದೆ. ಪ್ರತಿಯೊಂದು ಕೆಲಸಕ್ಕೂ ಸರ್ಕಾರವನ್ನೇ ಅವಲಂಬಿಸಿದರೆ ರೋಗಿಗಳಿಗೆ ನ್ಯಾಯ ನೀಡುವುದು ಅಸಾಧ್ಯ. ಸದ್ಯ ಲಯನ್ಸ್ ಸಂಸ್ಥೆ ನಿರ್ಮಾಣ ಮಾಡಿರುವ ಡಯಾಲಿಸೀಸ್ ಘಟಕವನ್ನು ಉತ್ತಮವಾಗಿ ನಿರ್ವಹಿಸಿಕೊಂಡು ಹೋಗಲಾಗುವುದು ಎಂದರು.


ಲಯನ್ಸ್ ಸಂಸ್ಥೆ ಅಧ್ಯಕ್ಷ ಉಮೇಶ್(ಜಯಶಂಕರ್)ಕಾರ್ಯದರ್ಶಿ ವಿಶ್ವನಾಥ್, ವಲಯ ಅಧ್ಯಕ್ಷ ಪ್ರಸನ್ನಕುಮಾರ್ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net