ಸಮಾಜ ಸೇವೆಗೆ ಸ್ವಲ್ಪ ಸಮಯ ಕೊಡಿ

rotary photo
Published on

ಬೀದರ್: ತಮ್ಮ ಕರ್ತವ್ಯ, ವೈಯಕ್ತಿಕ ಕೆಲಸಕಾರ್ಯಗಳ ನಡುವೆ ಪ್ರತಿಯೊಬ್ಬರೂ ಸಮಾಜ ಸೇವೆಗಾಗಿಯೂ ಒಂದಿಷ್ಟು ಸಮಯ ಕೊಟ್ಟರೆ ಸಮಾಜದಲ್ಲಿ ಸಾಕಷ್ಟು ಪರಿವರ್ತನೆ ತರಲು ಸಾಧ್ಯ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಹೇಳಿದರು.

ರೋಟರಿ ಕ್ಲಬ್ ಆಫ್ ಬೀದರ್ ವತಿಯಿಂದ ಇಲ್ಲಿನ ಡಾ. ಚನ್ನಬಸವ ಪಟ್ಟದ್ದೇವರ ರಂಗಮಂದಿರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ, ಪ್ರತಿಭಾನ್ವಿತ ವಿದ್ಯಾರ್ಥಿಗಳ, ಅಭಿಯಂತರರ ಹಾಗೂ ಸಾಧಕ ಶಿಕ್ಷಕರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಎಲ್ಲರೂ ಸೇರಿ ಸಾಮಾಜಿಕ ಚಟುವಟಿಕೆಗಳು ನಡೆಸಿದಾಗ ಅನೇಕ ಉತ್ತಮ ಕೆಲಸಗಳು ಆಗುತ್ತವೆ. ಹಲವರಿಗೆ ನೆರವು ಸಹ ಸಿಗಬಲ್ಲದು. ಈ ದಿಸೆಯಲ್ಲಿ ರೋಟರಿ ಕ್ಲಬ್ ನಡೆಸುತ್ತಿರುವ ವಿವಿಧ ಕೆಲಸಗಳು ಮಾದರಿಯಾಗಿವೆ ಎಂದು ಬಣ್ಣಿಸಿದರು.

ರೋಟರಿ ಕ್ಲಬ್ ಅಧ್ಯಕ್ಷ ಹಾವಶೆಟ್ಟಿ ಪಾಟೀಲ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶ್ವದ 200 ದೇಶಗಳಲ್ಲಿ ರೋಟರಿ ಸಂಸ್ಥೆಗಳು ಕೆಲಸ ಮಾಡುತ್ತಿವೆ. 12 ಲಕ್ಷಕ್ಕೂ ಹೆಚ್ಚು ಸದಸ್ಯರಿದ್ದಾರೆ. ಪೋಲಿಯೋ ನಿರ್ಮೂಲನೆ ಸೇರಿ ವಿವಿಧ ಸಮಸ್ಯೆ ನಿವಾರಿಸುವಲ್ಲಿ ರೋಟರಿ ಪಾತ್ರ ಹಿರಿದಾಗಿದೆ. ಬರುವ ದಿನಗಳಲ್ಲಿ ಜಿಲ್ಲಾಡಳಿತ ಸಹಯೋಗದಲ್ಲಿ ಜಿಲ್ಲೆಯಲ್ಲಿ ವಿವಿಧ ಸಾಮಾಜಿಕ ಕಾರ್ಯಚಟುವಟಿಕೆ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದರು.

ಗುಲ್ಬರ್ಗ ವಿವಿ ಸಿಂಡಿಕೇಟ್ ಸದಸ್ಯೆ ಪ್ರತಿಭಾ ಚಾಮಾ ಮಾತನಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ, ರೋಟರಿ ಕಲ್ಯಾಣ ಝೋನ್ ಸಹಾಯಕ ಗವರ್ನರ್ ಡಾ. ಜಗದೀಶ ಪಾಟೀಲ್, ಹಿರಿಯ ರೋಟೆರಿಯನ್ ಕೆ.ಸಿ.ಸೇನನ್, ಬಸವರಾಜ ಧನ್ನೂರ್, ಇಂಜಿನಿಯರ್ಸ್ ಅಸೋಸಿಯೇಷನ್ ಅಧ್ಯಕ್ಷ ರವಿ ಮೂಲಗೆ, ರೋಟರಿ ಕಾರ್ಯದರ್ಶಿ ರಂಜೀತ ಪಾಟೀಲ್, ಕೋಶಾಧ್ಯಕ್ಷ ಭಗವಂತಪ್ಪ ಇತರರಿದ್ದರು.

ನೀಟ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಗಳಿಸಿದ ಕಾರ್ತಿಕ್ ರೆಡ್ಡಿ ಸೇರಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಸಾಧನೆಗೈದ ಪ್ರತಿಭಾವಂತ ವಿದ್ಯಾರ್ಥಿಗಳು, ಸಾಧಕ ಶಿಕ್ಷಕರು, ನಿವೃತ್ತ ಇಂಜಿನಿಯರ್ಗಳಿಗೆ ಸನ್ಮಾನಿಸಲಾಯಿತು. ಬೆಳಗು ಸಾಂಸ್ಕೃತಿಕ ಮತ್ತು ಸಾಮಾಜಿಕ ಟ್ರಸ್ಟ್ ಕಲಾವಿದರಿಂದ ಸಂಗೀತ ಸಂಜೆ ನಡೆಯಿತು. ಸೃಷ್ಟಿ ಅಡಿಗ ಭರತನಾಟ್ಯ ಗಮನ ಸೆಳೆಯಿತು.

ಸೇವೆಗಿಂತ ಶ್ರೇಷ್ಠ ಕಾರ್ಯ ಮತ್ತೊಂದಿಲ್ಲ. ತೀರ ಅಗತ್ಯವಿದ್ದವರ ನೆರವಿಗೆ ಬರುವುದು ಸಮಾಜದ ಪ್ರತಿಯೊಬ್ಬರ ಕರ್ತವ್ಯವಾಗಬೇಕು. ಅಂದಾಗ ಮಾತ್ರ ಯಾರೂ ಸಮಸ್ಯೆಗಳಿಂದ ಬಳಲುವುದಿಲ್ಲ. ರೋಟರಿ ಕ್ಲಬ್ ನಡೆಸುವ ಸಾಮಾಜಿಕ ಸೇವಾ ಕಾರ್ಯಗಳಿಗೆ ಸಂಪೂರ್ಣ ಸಹಕಾರ ನೀಡಲಾಗುವುದು.ರಾಮಚಂದ್ರನ್, ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net