

ಎನ್.ಆರ್.ಪುರ: ಸೋಷಿಯಲ್ ವೆಲ್ಫೇರ್ ಸೊಸೈಟಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿಎಸ್‌ಡಬ್ಲುೃ ಅಂತಿಮ ವರ್ಷದ ವಿದ್ಯಾರ್ಥಿಗಳು ಗುರುವಾರ ಭೇಟಿ ನೀಡಿ ಸಂಸ್ಥೆಯ ಕಾರ್ಯವೈಖರಿ ವೀಕ್ಷಿಸಿದರು.
ಸೋಷಿಯಲ್ ವೆಲ್ಫೇರ್ ಸೊಸೈಟಿ ಕಾರ್ಯಕ್ರಮ ಸಂಯೋಜಕ ಪ್ರಭಾಕರ್ ಮಾಹಿತಿ ನೀಡಿ, ನಮ್ಮ ಸಂಸ್ಥೆಯಲ್ಲಿ ಮಹಿಳಾ ಸಾಂತ್ವನ ಕೇಂದ್ರ, ನೋರ್ಬಿ ನರ್ಸರಿ, ಟೈಲರಿಂಗ್ ಯೂನಿಟ್, ನೋರ್ಬಿ ಸ್ಟೋರ್, ಬೈಂಡಿಂಗ್ ಸೆಂಟರ್, ಮದ್ಯವರ್ಜನ ಘಟಕ, ಟ್ಯೂಷನ್ ಕ್ಲಾಸ್,ಅಂಚೆ ತರಬೇತಿ ಸೇರಿದಂತೆ ಹಲವಾರು ಕಾರ್ಯಕ್ರಮ ನಡೆಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಸಂಸ್ಥೆಯ ಸಿಸ್ಟರ್ ಚಾಲ್ಸ್ ಮಾಹಿತಿ ನೀಡಿ, 25 ವರ್ಷಗಳಿಂದ ಮದ್ಯ ವ್ಯಸನ ಬಿಡಿಸಲು ಔಷಧ ನೀಡುತ್ತಿದ್ದೇವೆ. ಇದರಿಂದ ಹಲವಾರು ಕುಟುಂಬಗಳು ಉತ್ತಮ ಜೀವನ ನಡೆಸುತ್ತಿವೆ ಎಂದರು.
ಮಹಿಳಾ ಸಾಂತ್ವನ ಕೇಂದ್ರದ ಬಗ್ಗೆ ಶಶಿಕಲಾ ಮಾಹಿತಿ ನೀಡಿ, ಕುಟುಂಬದವರಿಗೆ ದೌರ್ಜನ್ಯವಾದರೆ ಮಹಿಳಾ ಸಾಂತ್ವನ ಕೇಂದ್ರಕ್ಕೆ ಬಂದು ದೂರು ಸಲ್ಲಿಸಿ ಪರಿಹಾರ ಪಡೆಯಬಹುದು. ಅಲ್ಲದೆ ಸಹಾಯವಾಣಿ ನಂಬರ್ 181ಕ್ಕೆ ಕರೆ ಮಾಡಿ ಸಹಾಯ ಪಡೆದುಕೊಳ್ಳಬಹುದು. ನೊಂದ ಮಹಿಳೆಯರಿಗೆ ಆಪ್ತ ಸಮಾಲೋಚನೆ, ಪೊಲೀಸ್ ರಕ್ಷಣೆ, ಉಚಿತ ಕಾನೂನು ನೆರವು, ತಾತ್ಕಾಲಿಕ ಆಶ್ರಯ ನೀಡಲಾಗುವುದು ಎಂದರು.
ಸೋಷಿಯಲ್ ವೆಲ್ಫೇರ್ ಸೊಸೈಟಿ ನಿರ್ದೇಶಕ ಸಿಬಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್‌ಗಳಾದ ಡಾ. ಮೇರಿ ಹಾಗೂ ಹೇಮಲತಾ ಇದ್ದರು.