ಸಮಾಜ ಸೇವೆ ಪ್ರತಿಯೊಬ್ಬರ ಹೊಣೆ

22
Published on

ಮೈಸೂರು: ಪ್ರತಿಯೊಬ್ಬರು ಹೊಣೆಗಾರಿಕೆ ತೆಗೆದುಕೊಂಡು ಸಮಾಜಮುಖಿ ಕೆಲಸ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದರು.


ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಶ್ರಾವಣ ಮಾಸದ ಪೂಜಾನುಷ್ಠಾನ ಮತ್ತು ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಪ್ರತಿಯೊಂದು ಕೆಲಸವನ್ನೂ ಸರ್ಕಾರವೇ ಮಾಡಲಿ ಎಂದುಕೊಂಡು ಸಾರ್ವಜನಿಕರು ಕೈಕಟ್ಟಿ ಕುಳಿತುಕೊಳ್ಳಬಾರದು. ಬದಲಿಗೆ ಪ್ರತಿಯೊಬ್ಬರು ತಮ್ಮ ಸಾಮರ್ಥ್ಯಕ್ಕೆ ಅನುಸಾರವಾಗಿ ಸಾಮಾಜಿಕ ಕಾರ್ಯ ಮಾಡಬೇಕು. ಸುತ್ತಲಿ ಪರಿಸರ ಸಂರಕ್ಷಣೆ, ಸ್ವಚ್ಛತೆ, ಸಹಬಾಳ್ವೆ, ಸೌಹಾರ್ದತೆ ಕಾಪಾಡಿಕೊಂಡುವಂತಹ ಸಣ್ಣ ಕೆಲಸವನ್ನಾದರೂ ಮೈಗೂಡಿಸಿಕೊಳ್ಳಬೇಕು ಎಂದರು.


ದಾರಿ ತಪ್ಪುತ್ತಿರುವ ಯುವ ಜನರು, ಸಮಾಜವನ್ನು ಮಠಗಳು ಸತ್ಕಾರ್ಯದ ಮೂಲಕ ಸರಿದಾರಿಗೆ ತರುವ ಕೆಲಸವನ್ನು ಮಾಡುತ್ತಿವೆ. ಈ ವಿಷಯದಲ್ಲಿ ಸುತ್ತೂರುಮಠದ ಕಾಣಿಗೆ ದೊಡ್ಡದು. ಇದು ಸರ್ಕಾರಕ್ಕೆ ಪರ್ಯಾಯವಾಗಿ ಕೆಲಸ ಮಾಡುತ್ತಿದೆ. ಶಿಕ್ಷಣ, ಆರೋಗ್ಯ, ದಾಸೋಹದಂತಹ ಜನೋಪಯೋಗಿ ಕಾಯಕವನ್ನು ಸರ್ಕಾರಕ್ಕಿಂತಲೂ ಮಠವು ಉತ್ತಮವಾಗಿ ನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಗುರಿ-ಗುರು ಪರಂಪರೆ ಇಲ್ಲದಿದ್ದರೆ ಸಮಾಜ ಹಿಂದು ಬೀಳುತ್ತದೆ. ಆದರೆ, ನಾಡಿನ ಗುರು ಪರಂಪರೆ ಶ್ರೀಮಂತವಾಗಿದೆ. ಇದುವೇ ಭವಿಷ್ಯದ ಸಮಾಜವನ್ನು ಕಟ್ಟಲು ನೆರವಾಗಲಿದೆ ಎಂದರು.


ಸುತ್ತೂರುಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಚಾಮರಾಜನಗರ ತಾಲೂಕಿನ ಮರಿಯಾಲದ ಶ್ರೀ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ, ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ ಸೇರಿದಂತೆ ಇನ್ನಿತರರಿದ್ದರು.


ಬಳಿಕ ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ.ಕೆ.ಅನಂತರಾಮು ಅವರು ಲಕ್ಕಣ್ಣ ದಂಡೇಶ ವಿರಚಿತ ಶಿವತತ್ವ ಚಿಂತಾಮಣಿ ಕುರಿತು ಪ್ರವಚನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net