ಸಮಾಜ ಸೇವಕರನ್ನು ಜನ ಮರೆಯುವುದಿಲ್ಲ: ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್

mysore
Published on

ಮೈಸೂರು: ಸಾಧಕರು ಅವರಿಗೋಸ್ಕರ ಬದುಕುವುದಿಲ್ಲ. ಸಮಾಜಗೋಸ್ಕರ ಬದುಕುತ್ತಾರೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಹೇಳಿದರು.

ಚಾಮರಾಜನಗರ ರಂಗವಾಹಿನಿ, ಮೆಸೂರಿನ ನೆಲೆ- ಹಿನ್ನೆಲೆ, ಡಾ. ರಾಮ ಮನೋಹರ ಲೋಹಿಯಾ ಟ್ರಸ್ಟ್ ಸಹಯೋಗದಲ್ಲಿ ಕಿರುರಂಗಮಂದಿರದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಮುಳ್ಳೂರು ನಾಗರಾಜ ರಾಜ್ಯ ಮಟ್ಟದ ಕಾವ್ಯ ಪ್ರಶಸ್ತಿ ಪ್ರದಾನ, ರಾಜಶೇಖರ ಕೋಟಿ ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೇವಲ ಸಂಸಾರಕ್ಕೆ ಸೀಮಿತರಾದವರನ್ನು ಯಾರೂ ನೆನಪಿಸಿಕೊಳ್ಳುವುದಿಲ್ಲ. ಕೆಲವರು ಸಾಧಕರಿರುತ್ತಾರೆ. ಮತ್ತೆ ಕೆಲವರು ಸಮಯ ಸಾಧಕರು ಇರುತ್ತಾರೆ. ಸಮಾಜಕ್ಕೆ ಅರ್ಪಿಸಿಕೊಂಡವರನ್ನು ಜನ ಯಾವತ್ತೂ ಮರೆಯುವುದಿಲ್ಲ, ಸದಾ ಸ್ಮರಿಸುತ್ತಿರುತ್ತಾರೆ. ಇದಕ್ಕೆ ಮುಳ್ಳೂರು ನಾಗರಾಜ ಹಾಗೂ ರಾಜಶೇಖರ ಕೋಟಿ ಅವರನ್ನು ಇಂದಿಗೂ ಸ್ಮರಿಸುತ್ತಿರುವುದೇ ಸಾಕ್ಷಿ ಎಂದರು.

ಮುಳ್ಳೂರು ನಾಗರಾಜ ಅವರು ಸರ್ಕಾರಿ ಕೆಲಸವನ್ನು ತಿರಸ್ಕರಿಸಿ, ಸಮಾಜಕ್ಕೆ ಅರ್ಪಿಸಿಕೊಂಡವರು. ತಮ್ಮ ಸಾಹಿತ್ಯದ ಮೂಲಕ ದಲಿತ ಸಂಘರ್ಷ ಸಮಿತಿಯ ಹೋರಾಟಕ್ಕೆ ಜೀವ ತುಂಬಿದವರು. ಕೋಟಿ ಅವರು ಪತ್ರಿಕೋದ್ಯಮದ ಮೂಲಕ ಎಲ್ಲ ಹೋರಾಟಗಳಿಗೆ ಉತ್ತೇಜನ ನೀಡಿದ್ದರು ಎಂದು ಸ್ಮರಿಸಿದರು.

70 ದಶಕದ ಅಖಂಡ ದಲಿತ ಚಳವಳಿಯನ್ನು ಪ್ರಪಂಚದ ಬೇರೆ ಯಾವುದೇ ಚಳವಳಿಗೆ ಹೋಲಿಸಲಾಗದು. ಅಷ್ಟರಮಟ್ಟಿಗೆ ಆ ಚಳವಳಿ ಪ್ರಾಮಾಣಿಕತೆಯಿಂದ, ತಲ್ಲೀನತೆಯಿಂದ ಕೂಡಿತ್ತು. ವೇದನೆ- ನಿವೇದನೆ ಇತ್ತು. ಜೀವಂತಿಕೆ ಇತ್ತು. ಅಷ್ಟೊಂದು ಅಂತಃಶಕ್ತಿ, ಆತ್ಮಸ್ಥೆರ್ಯ ಇತ್ತು. ಅಲ್ಲಿ ದೌರ್ಜನ್ಯ ನಡೆದರೂ ಪ್ರತಿಭಟಿಸುವ, ಪ್ರಶ್ನಿಸಲಾಗುತ್ತಿತ್ತು. ದಲಿತೇತರರು ಕೂಡ ಆ ಹೋರಾಟದ ನೆರಳಿನಲ್ಲಿ ನೆಮ್ಮದಿಯಿಂದ ಇದ್ದರು ಎಂದು ಹೇಳಿದರು.

ಶಾಸಕ ದರ್ಶನ್ ಧ್ರುವನಾರಾಯಣ್ ಮಾತನಾಡಿ, ಮುಳ್ಳೂರು ನಾಗರಾಜ ಅವರ ಕೊಡುಗೆಯನ್ನು ಸ್ಮರಿಸಿ ನಂಜನಗೂಡಿನ ಪ್ರಮುಖ ರಸ್ತೆಗೆ ಅವರ ಹೆಸರಿಡಲಾಗಿದೆ ಎಂದರು.

ಕೋಟಿಯವರು ಪತ್ರಿಕೆಯ ಜತೆಗೆ ಕ್ರೀಡೆಗೆ ಉತ್ತೇಜನ ನೀಡುತ್ತಿದ್ದರು. ಜನರ ಧ್ವನಿಯಾಗಿ ಕೆಲಸ ಮಾಡಿದರು ಎಂದರು.

ಮುಳ್ಳೂರು ನಾಗರಾಜ ಅವರನ್ನು ಕುರಿತು ಕಲಬುರಗಿ ಕೇಂದ್ರೀಯ ವಿವಿ ಸಹಾಯಕ ಪ್ರಾಧ್ಯಾಪಕ ಡಾ.ಅಪ್ಪಗೆರೆ ಸೋಮಶೇಖರ್, ರಾಜಶೇಖರ ಕೋಟಿ ಅವರನ್ನು ಕುರಿತು ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿದರು.

ಕಲಬುರಗಿಯ ಎನ್.ಎಸ್. ಚಾಂದ್‌ಪಾಷ ಹಾಗೂ ಯಾದಗಿರಿಯ ಪಿ. ನಂದಕುಮಾರ್ ಅವರಿಗೆ ಮುಳ್ಳೂರು ನಾಗರಾಜ ಕಾವ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಜಂಟಿ ನಿರ್ದೇಶಕಿ ಲಕ್ಷ್ಮಮ್ಮ, ರಂಗಕರ್ಮಿ ಕೆ.ಆರ್. ಗೋಪಾಲಕೃಷ್ಣ, ನಂಜನಗೂಡು ತಾಪಂ ಮಾಜಿ ಅಧ್ಯಕ್ಷ ನಾಗೇಶ್ ರಾಜ್, ರಂಗವಾಹಿನಿ ಅಧ್ಯಕ್ಷ ಸಿ.ಎಂ. ನರಸಿಂಹಮೂರ್ತಿ, ಸಂಚಾಲಕ ರೂಬಿನ್ ಸಂಜಯ್, ಪತ್ರಕರ್ತ ಮುಳ್ಳೂರು ರಾಜು ಇದ್ದರು. ಬಳಿಕ ಹನೂರು ಚನ್ನಪ್ಪ ರಚನೆಯ ’ಬೆಲ್ಲದ ದೋಣಿ’ ನಾಟಕವನ್ನು ಪ್ರದರ್ಶಿಸಲಾಯಿತು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net