

ಹಾಸನ: ಸಮಾಜ ಸೇವಕ, ಕನ್ನಡಪರ ಹೋರಾಟಗಾರ, ವಾಲ್ಮೀಕಿ ಸಮುದಾಯದ ಹಿರಿಯ ನಾಯಕ ಜಿ.ಓ.ಮಹಾಂತಪ್ಪ(74) ಅವರು ಬುಧವಾರ ಹೃದಯಾಘಾತದಿಂದ ನಿಧನರಾದರು.
ಕಾರ್ಯಕ್ರಮ ನಿಮಿತ್ತ ಬೆಂಗಳೂರಿಗೆ ಹೋಗಿದ್ದ ಅವರು, ನಡುವೆ ಕುಸಿದು ಬಿದ್ದರು.ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತರು ಪತ್ನಿ, ಮೂವರು ಪುತ್ರರು ಹಾಗೂ ಅಪಾರ ಬಂಧು-ಬಳಗ ಅಗಲಿದ್ದಾರೆ.
ಮಹಾಂತಪ್ಪ ಅವರು ಸಮಾಜ ಸೇವೆ ಜೊತೆಯಲ್ಲೇ ಸಾಹಿತ್ಯ ಸೇವೆಯನ್ನೂ ಮಾಡಿದವರು. ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘ ಸ್ಥಾಪಿಸಿ ಅದರ ಅಧ್ಯಕ್ಷರೂ ಆಗಿದ್ದರು. ಹಾಸನ ಜಿಲ್ಲಾ ವಾಲ್ಮೀಕಿ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುವ ಮೂಲಕ ಸಮಾಜದ ಏಳಿಗೆಗಾಗಿ ದುಡಿದಿದ್ದರು. ಜೊತೆಗೆ ಹತ್ತಾರು ಸಂಘ-ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ತಮ್ಮ ಕೈಲಾದ ಸೇವೆ ಮಾಡಿದ್ದರು. ಇವರಿಗೆ ರಾಜ್ಯ ಮತ್ತು ಜಿಲ್ಲಾ ಮಟ್ಟದ ಹಲವು ಪ್ರಶಸ್ತಿಗಳು ಇವರ ಮುಡಿಗೇರಿವೆ. ಮೃತನ ನಿಧನಕ್ಕೆ ಸಮಾಜದ ಹಲವು ಮುಖಂಡರು, ವಿವಿಧ ಕ್ಷೇತ್ರಗಳ ಗಣ್ಯರು ಕಂಬನಿ ಮಿಡಿದಿದ್ದಾರೆ.
ಮಹಾಂತಪ್ಪ ನವರ ಪಾರ್ಥಿವ ಶರೀರವನ್ನು ಇಂದು ರಾತ್ರಿ ನಗರದ ಎಸ್.ಎಂ ಕೃಷ್ಣನಗರ ಬಡವಾಣೆಯಯಲ್ಲಿರುವ ನಿವಾಸಕ್ಕೆ ತರಲಾಗುತ್ತದೆ. ಗುರುವಾರ ಅಂತ್ಯಕ್ರಿಯೆ ಮಾಡಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿದ್ದಾರೆ.