ಸಮಾಜ ಸುಧಾರಣೆಗೆ ಶರಣರ ಕೊಡುಗೆ ಅಪಾರ : ಜಿಲ್ಲಾಧಿಕಾರಿ ವೆಂಕಟ್​ ರಾಜಾ ಅಭಿಪ್ರಾಯ, ದೇವರ ದಾಸಿಮಯ್ಯ ಜಯಂತಿ ಉದ್ಘಾಟನೆ

1
Published on

ಕೋಲಾರ: ಕೃಷಿ ಮಾಡಿಕೊಂಡೇ ಸಮಾಜ ಸುಧಾರಣೆಗೆ ಯತ್ನಿಸಿದ ದೇವರ ದಾಸಿಮಯ್ಯ ತೋರಿದ ಮಾರ್ಗದಲ್ಲಿ ಎಲ್ಲರೂ ಸಾಗೋಣ ಎಂದು ಜಿಲ್ಲಾಧಿಕಾರಿ ವೆಂಕಟ್​ ರಾಜಾ ತಿಳಿಸಿದರು.

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಬುಧವಾರ ಜಿಲ್ಲಾಡಳಿತ ಆಯೋಜಿಸಿದ್ದ ದೇವರ ದಾಸಿಮಯ್ಯ ಜಯಂತಿ ಉದ್ಘಾಟಿಸಿ ಮಾತನಾಡಿದರು.

ಶರಣರು ಸಮಾಜ ಸುಧಾರಣೆಗೆ ಅಪಾರ ಕೊಡುಗೆ ನೀಡಿದ್ದಾರೆ. ವಚನಗಳಲ್ಲಿ ಭಕ್ತಿ ಮತ್ತು ನಡತೆ ಬಗ್ಗೆ ಮಾರ್ಗದರ್ಶನ ನೀಡಿದ್ದಾರೆ. ಆದರೆ ಇಂದಿನ ದಿನಗಳಲ್ಲಿ ಟಿವಿ ಮೊಬೈಲ್​ಗಳಿಗೆ ಮಾರುಹೋಗಿರುವ ಯುವ ಜನ ವಚನಕಾರರು, ದಾಸರು ಮತ್ತು ಸಮಾಜ ಸುಧಾರಕರು ನೀಡಿರುವ ಸಂದೇಶಗಳನ್ನು ತಿಳಿಯುವ ಪ್ರಯತ್ನ ಮಾಡುತ್ತಿಲ್ಲ. ಹೀಗಾಗಿ ಯುವ ಜನರಿಗೆ ಮಹನೀಯರ ಸಂದೇಶಗಳನ್ನು ಮನದಟ್ಟು ಮಾಡಿಸುವ ಕೆಲಸವಾಗಬೇಕಿದೆ ಎಂದರು.

ಸಮುದಾಯಕ್ಕೆ ಅಪಾರ ಕೊಡುಗೆ ನೀಡಿದ ದಾಸಿಮಯ್ಯ ಮಾರ್ಗದರ್ಶನದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಹೋಗಬೇಕಾಗಿದೆ. ಯಾದಗಿರಿ ಜಿಲ್ಲೆ ಮುದನೂರಿನಲ್ಲಿ ಜನಿಸಿದ ದಾಸಿಮಯ್ಯ ಕೃಷಿ ಕಾಯಕ ಮರೆಯದೆ ಶಿವ ಭಕ್ತರಾಗಿದ್ದುಕೊಂಡು ಸಮಾಜ ಕಟ್ಟುವ ಕೆಲಸ ಮಾಡಿದ್ದಾರೆ. ಇವರ ವಚನಗಳಲ್ಲಿ ದೇವರ ಸಾಕ್ಷಾತ್ಕಾರದ ಜತೆಗೆ ನಾವು ಸಮುದಾಯದೊಂದಿಗೆ ಯಾವ ರೀತಿ ನಡೆದುಕೊಳ್ಳಬೇಕು ಎಂಬುದರ ಬಗ್ಗೆ ಅರಿವು ಮೂಡಿಸಿರುವುದನ್ನು ಕಾಣಬಹುದು. ಇಂತಹ ಮಹನೀಯರ ಜೀವನ ಚರಿತ್ರೆ ಅರಿತು ಅವರು ತೋರಿದ ಹಾದಿಯಲ್ಲಿ ಸಾಗೋಣ ಎಂದರು. ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ನರೇಂದ್ರಬಾಬು, ಮುಖಂಡರಾದ ಪ್ರಶಾಂತ್​, ನಂಜುಡೇಶ್ವರ, ಶ್ರೀನಿವಾಸ್​, ಮುನಿನಾರಾಯಣಬಾಬು, ಲೋಕೇಶ್​, ವಿನಯ್​ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net