ಸಮಾಜ ಸುಧಾರಣೆಗೆ ಪಾಂಡಿತ್ಯ ಬಳಸಿ, ನ್ಯಾಯಮೂರ್ತಿ ಎಚ್. ಬಿಲ್ಲಪ್ಪ ಸಲಹೆ, ಕಾನೂನು ವಿವಿಯಲ್ಲಿ ಕನ್ನಡ ಕಲ್ಪಿತ ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

h10-Law College 1
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ವಕೀಲಿಕೆ ಎನ್ನುವುದು ಸಂಶೋಧನೆಗೆ ಯೋಗ್ಯವಾದ ವೃತ್ತಿಯಾಗಿದೆ. ಇಲ್ಲಿ ಕಲಿಕೆ ಎಂಬುದು ನಿರಂತರವಾಗಿರುತ್ತದೆ. ಈ ವೃತ್ತಿ ಆಯ್ದುಕೊಳ್ಳುವವರು ಅಗಾದ ಪಾಂಡಿತ್ಯವನ್ನು ಗಳಿಸಿಕೊಳ್ಳುವುದು ಅವಶ್ಯಕ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎಚ್. ಬಿಲ್ಲಪ್ಪ ಅವರು ಹೇಳಿದರು.

ಇಲ್ಲಿಯ ನವನಗರದಲ್ಲಿರುವ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವು ಎರಡು ದಿನಗಳ ಕಾಲ ಹಮ್ಮಿಕೊಂಡಿರುವ 9ನೇ ಕನ್ನಡ ಕಲ್ಪಿತ ನ್ಯಾಯಾಲಯ ಸ್ಪರ್ಧೆಯನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ವಕೀಲರು ಗಳಿಸಿದ ಜ್ಞಾನ, ಕೌಶಲಗಳನ್ನು ಸಮಾಜದ ಶ್ರೇಯೋಭಿವೃದ್ಧಿಗೆ ಬಳಸಬೇಕು. ದುಡ್ಡಿಗೆ ಬೆಲೆ ಕೊಟ್ಟರೆ ಅದು ಬಿಜನೆಸ್ ಆಗುತ್ತದೆ. ಯಾವುದೇ ವೃತ್ತಿ ಇರಲಿ ಅದು ವ್ಯಾಪಾರವಾದರೆ ಅಲ್ಲಿ ಸಮಾಜವು ಕಷ್ಟಕ್ಕೆ ಸಿಲುಕಿಕೊಳ್ಳುತ್ತದೆ. ಸಮಾಜ ಸೇವೆಗೆ ನಿಮ್ಮ ಜ್ಞಾನ ಬಳಕೆಯಾದರೆ ಅದು ವೃತ್ತಿಯ ಶ್ರೇಷ್ಠತೆಯನ್ನು ಸಾರುತ್ತದೆ ಎಂದು ಅಭಿಪ್ರಾಯಪಟ್ಟರು.

ಉತ್ತಮ ವಲೀಕರನ್ನು ಸೃಷ್ಟಿ ಮಾಡಲು ಇಂತಹ ಕಲ್ಪಿತ ನ್ಯಾಯಾಲಯ ಸ್ಪರ್ಧೆಯು ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತದೆ.ಫಲಿತಾಂಶದ ಬಗ್ಗೆ ಚಿಂತೆ ಮಾಡದೇ ನಿಮ್ಮ ಪಾಲಿನ ಓಟವನ್ನು ಓಡಿ ಮುಗಿಸಬೇಕು. ಆಗಲೇ ಏನಾದರೂ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.

ವಕೀಲ ವೃತ್ತಿಯು ತನ್ನದೆ ಆದ ವಿಶೇಷತೆಯನ್ನು ಹೊಂದಿದ್ದು, ಇದರಲ್ಲಿ ಶ್ರೇಷ್ಠತೆಯನ್ನು ಮೆರೆದು ಸಮಾಜ ನಿರೀಕ್ಷಿಸುವ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ಸಿ. ಬಸವರಾಜು ಮಾತನಾಡಿ, ವೃತ್ತಿ ಬದುಕಿಗೆ ಅವಶ್ಯಕವಿರುವ ವಾಕ್​ಚಾತುರ್ಯ, ಆತ್ಮವಿಶ್ವಾಸ, ಧೈರ್ಯ, ಭಾಷೆಯ ಮೇಲಿನ ಹಿಡಿತ, ವಾದ ಮಂಡಿಸುವ ಕಲೆ, ನಾಯಕತ್ವದಂತಹ ಗುಣಗಳನ್ನು ಮೈಗೂಡಿಸಿಕೊಳ್ಳಲು ಕಲ್ಪಿತ ನ್ಯಾಯಾಲಯದಂತಹ ಸ್ಪರ್ಧೆಗಳು ಅತ್ಯಂತ ಸಹಕಾರಿಯಾಗಿವೆ ಎಂದರು.

ಕುಲಸಚಿವ ಮಹಮ್ಮದ್ ಝುುಬೇರ, ಡೀನ್ ಡಾ. ರತ್ನಾ ಭರಮಗೌಡರ್, ನ್ಯಾಯಾಧೀಶರು, ಸಿಂಡಿಕೇಟ ಸದಸ್ಯರು ಉಪಸ್ಥಿತರಿದ್ದರು.

ಸಂಯೋಜಕರಾದ ಡಾ. ಸುನೀಲ ಬಾಗಡೆ, ಡಾ. ರಾಜೇಂದ್ರಕುಮಾರ ಹಿಟ್ಟಣಗಿ, ಅರ್ಚನಾ ಕೆ., ಐ.ಬಿ. ಬಿರಾದಾರ, ಗಿರೀಶಗೌಡ ಪಾಟೀಲ, ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಇದ್ದರು.

ಪ್ರಜಾಪ್ರಭುತ್ವ ಮತ್ತು ಸಂವಿಧಾನಿಕ ಸರ್ಕಾರ ಅಧ್ಯಯನ ಕೇಂದ್ರದ ಮುಖ್ಯಸ್ಥ ಪ್ರೊ. ಸಿ.ಎಸ್. ಪಾಟೀಲ ಸ್ವಾಗತಿಸಿದರು. ಕಾನೂನು ಶಾಲೆಯ ವಿದ್ಯಾರ್ಥಿನಿ ತನ್ಮಯಿ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಮೌಲ್ಯಮಾಪನ ಕುಲಸಚಿವ ಡಾ. ಜಿ.ಬಿ. ಪಾಟೀಲ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net