ಸಮಾಜ ಸುಧಾರಕ ವಿಶ್ವಗುರು ಬಸವಣ್ಣ

Goshti
ಬಸವಕಲ್ಯಾಣದಲ್ಲಿ ನಡೆದ ಗೋಷ್ಠಿಯಲ್ಲಿ ಪೂಜ್ಯ ಡಾ.ಗಂಗಾಂಬಿಕೆ ಅಕ್ಕ, ಪ್ರೊ.ಡಾ.ಎಸ್.ಜಯರಾಮರೆಡ್ಡಿ, ಪ್ರೊ.ತಾಂಗೇಡ ಕಿಸಾನರಾವ, ಕೆ.ಪ್ರಸನ್ನಕುಮಾರ, ಡಾ.ಜಿ.ಎಸ್.ಭುರಾಳೆ, ಶಿವರಾಜ ನರಶೆಟ್ಟಿ, ಜಗನ್ನಾಥ ಖೂಬಾ, ಡಾ.ಸುರೇಶ ಪಾಟೀಲ್, ಶಿವಕುಮಾರ ಸಾಲಿ ಇತರರಿದ್ದರು.
Published on

ಬಸವಕಲ್ಯಾಣ: ಬಸವಣ್ಣನವರು ೧೨ನೇ ಶತಮಾನದ ಶ್ರೇಷ್ಠ ತತ್ವಜ್ಞಾನಿ, ಸಮಾಜ ಸುಧಾರಕರು ಎಂದು ಆಂಧ್ರಪ್ರದೇಶದ ಶ್ರೀ ಚಂದ್ರಶೇಖರ ಸರಸ್ವತಿ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಡಾ.ಎಸ್. ಜಯರಾಮರೆಡ್ಡಿ ಹೇಳಿದರು.

ಅಂತಾರಾಷ್ಟ್ರೀಯ ಲಿಂಗಾಯತ ಧರ್ಮಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ಸಹಯೋಗದಡಿ ಶರಣ ವಿಜಯೋತ್ಸವ ನಾಡಹಬ್ಬ ಹುತಾತ್ಮ ದಿನಾಚರಣೆ ೯ನೇ ದಿನವಾದ ಮಂಗಳವಾರ ಏರ್ಪಡಿಸಿದ್ದ ಬಸವ ಬೆಳಕು ಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಪುರುಷರಂತೆ ಮಹಿಳೆಯರಿಗೂ ಸಮಾನ ಅವಕಾಶ ನೀಡಲಾಗಿತ್ತು ಎಂದರು.

ಹೈದರಾಬಾದ್‌ನ ತೆಲುಗು ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಪ್ರೊ.ತಾಂಗೇಡ ಕಿಸಾನರಾವ ಮಾತನಾಡಿ, ಬಸವಕಲ್ಯಾಣ, ಕೂಡಲಸಂಗಮ ಹಾಗೂ ಬಸವನ ಬಾಗೇವಾಡಿ ಪವಿತ್ರ ಕ್ಷೇತ್ರಗಳು. ಚತುರ್ವರ್ಣ ವ್ಯವಸ್ಥೆ ವಿರುದ್ಧ ಸರ್ವ ಸಮಾನತೆ ಸಂದೇಶ ಸಾರಿದ ನೆಲದಲ್ಲಿದ್ದ ಅನುಭವ ಮಂಟಪ ವಿಶ್ವವಿದ್ಯಾಲಯವಾಗಿತ್ತು ಎಂದು ಹೇಳಿದರು.

ನೇತೃತ್ವ ವಹಿಸಿದ್ದ ಪೂಜ್ಯ ಡಾ.ಗಂಗಾಂಬಿಕೆ ಅಕ್ಕ ಮಾತನಾಡಿ, ೧೨ನೇ ಶತಮಾನದಲ್ಲಿ ಕಲ್ಯಾಣ ಕ್ರಾಂತಿ ನಂತರ ಬಸವಣ್ಣನವರ ಚರಿತ್ರೆ ಉಳಿಸಿದ್ದು ತೆಲುಗಿನಲ್ಲಿ ರಚನೆಯಾದ ಬಸವ ಪುರಾಣ. ಅನುಭವ ಮಂಟಪ ಮೂಲಕ ಸರ್ವ ಸಮಾನತೆ ತತ್ವಗಳನ್ನು ಹೇಳಿದ ಪವಿತ್ರ ನೆಲ ಕಲ್ಯಾಣ. ಮಾನವೀಯ ಮೌಲ್ಯಗಳನ್ನು ಹೊಂದಿರುವ ವಚನಗಳನ್ನು ಮಕ್ಕಳಲ್ಲಿ ಬಿತ್ತಬೇಕು ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ಬಸವೇಶ್ವರ ದೇವಸ್ಥಾನ ವಿಶ್ವಸ್ಥ ಸಮಿತಿ ಉಪಾಧ್ಯಕ್ಷ ಡಾ.ಜಿ.ಎಸ್. ಭುರಾಳೆ ಮಾತನಾಡಿ, ಬಸವಾದಿ ಶರಣರ ತತ್ತ್ವಗಳು ಇಂದು ಮುಂದು ಎಂದೆಂದಿಗೂ ಶಾಶ್ವತ. ಇವುಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು ಎಂದರು.

ಕೇರಳ ಬಸವ ಸಮಿತಿ ಅಧ್ಯಕ್ಷ ಕೆ. ಪ್ರಸನ್ನಕುಮಾರ ಮಾತನಾಡಿದರು. ಮುಖಂಡ ಶಿವರಾಜ ನರಶೆಟ್ಟಿ, ಬಿಡಿಪಿಸಿ ನಿರ್ದೇಶಕ ಜಗನ್ನಾಥ ಖೂಬಾ, ವಚನ ಚಾರಿಟೇಬಲ್ ಸೊಸೈಟಿ ಅಧ್ಯಕ್ಷ ಡಾ.ಸುರೇಶ ಪಾಟೀಲ್, ವಚನ ಸೌಹಾರ್ದ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಿವಕುಮಾರ ಸಾಲಿ, ಪ್ರಮುಖರಾದ ವೀರಯ್ಯ ಸ್ವಾಮಿ, ಲಕ್ಷ್ಮೀಕಾಂತ ಜ್ಯಾಂತೆ, ಶಿವಕುಮಾರ ಕುದುರೆ, ರೇವಣಸಿದ್ಧ ಸುಗೂರೆ ಮಂಠಾಳ, ಭೀಮರಾವ ಪಾಟೀಲ್ ಲಾತೂರ, ಚಂದ್ರಕಾಂತ ಜೋಕಾರೆ, ಸಂಗೀತಾ ಪಟ್ನೆ, ಇಂದುಮತಿ ಅಬ್ದಗಿರೆ ಇದ್ದರು. ಚಂದ್ರಕಾಂತ ಅಕ್ಕಣ್ಣ ಸ್ವಾಗತಿಸಿದರು. ಸುನೀಲ ಹೆಂಗ್ಗಣೆ ನಿರೂಪಣೆ ಮಾಡಿದರು. ಮಹಾರಾಷ್ಟçದ ಶಿವಾನಂದ ದಾಪಶೆಟ್ಕರ್ ಅವರ ಬಸವ ಕೀರ್ತನ ಗಮನ ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net