ಸಮಾಜ ಮುನ್ನಡೆಸಲು ವಚನಗಳು ಸಹಕಾರಿ

jayanthi
ಕೋಲಾರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ನುಲಿಯ ಚಂದಯ್ಯ ಜಯಂತಿಗೆ ಅಪರ ಜಿಲ್ಲಾಧಿಕಾರಿ ಡಾ. ಶಂಕರ್ ವಣಿಕ್ಯಾಳ್ ಚಾಲನೆ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಗೀತಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯದರ್ಶಿ ಶಿವಕುಮಾರ್ ಮತ್ತಿತರರು ಇದ್ದರು.
Published on

ಕೋಲಾರ: ಮಹಾಶರಣರ ಪುಸ್ತಕಗಳನ್ನು ಯುವ ಜನ ಓದುವುದರ ಜತೆಗೆ ವಚನಗಳಲ್ಲಿನ ಸಾರಾಮೃತ ಸವಿಯಬೇಕು. ಇದರಿಂದ ಅವರು ಸನ್ಮಾರ್ಗದಲ್ಲಿ ನಡೆಯಲು ಸಹಕಾರಿಯಾಗುವುದಲ್ಲದೆ, ಸಮಾಜ ಸರಿದಾರಿಯಲ್ಲಿ ಸಾಗಲು ಸಹಕಾರಿಯಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಶಂಕರ್ ವಣಿಕ್ಯಾಳ್ ತಿಳಿಸಿದರು.
ನಗರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಗುರುವಾರ ಜಿಲ್ಲಾಡಳಿತ ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನುಲಿಯ ಚಂದಯ್ಯ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿ, ಯುವಜನರಿಗೆ ವಚನಕಾರರು, ದಾಸರು ಮತ್ತು ಭಕ್ತಿಪಂಥದವರು ತಮ್ಮ ಸಾಹಿತ್ಯದ ಮೂಲಕ ಸಾರಿರುವ ಮಾರ್ಗದರ್ಶನ ತಿಳಿಯಬೇಕಿದೆ. ಮೊಬೈಲ್ ಗೀಳಿಗೆ ಬಿದ್ದಿರುವ ಯುವ ಸಮುದಾಯ ಜಗತ್ತಿನಲ್ಲಿ ಎಲ್ಲೂ ಸಿಗದ ನಮ್ಮ ಅಗಾಧ ಸಾಹಿತ್ಯ ಭಂಡಾರದ ಸ್ವಲ್ಪವಾದರೂ ಓದಲು ಸಿಕ್ಕರೆ ಖಂಡಿತಾ ಸರಿದಾರಿಯಲ್ಲಿ ನಡೆಯುತ್ತಾರೆ. ಓದುವ ಅಭಿರುಚಿ ಬೆಳೆಸಿಕೊಂಡರೆ ಪ್ರತಿಯೊಬ್ಬರೂ ಜೀವನದಲ್ಲಿ ಸಾಧನೆ ಮಾಡುವುದರ ಜತೆಗೆ ಸತ್ಪ್ರಜೆಗಳಾಗಬಹುದು ಎಂದರು.
ಮಹನೀಯರ ಹಿತವಚನ ಕೇಳದಿದ್ದರೆ ನಮಗೇ ನಷ್ಟ ಎಂಬುದನ್ನು ಪ್ರತಿಯೊಬ್ಬರೂ ಅರ್ಥೈಸಿಕೊಳ್ಳಬೇಕು. ಅವರ ಜಯಂತಿಗಳ ಸಂದರ್ಭದಲ್ಲಿ ಹೆಚ್ಚು ಜನ ಭಾಗವಹಿಸಿ ಅವರ ಆಶಯ ಅರಿಯಬೇಕು. ಅವರ ತತ್ವಾದರ್ಶ ಪಾಲಿಸುವ ಮೂಲಕ ಜನ್ಮ ಸಾರ್ಥಕಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
೧೨ನೇ ಶತಮಾನದಲ್ಲಿ ಬಸವಣ್ಣನವರಿಂದಾಗಿ ಕಲ್ಯಾಣದಲ್ಲಿ ವರ್ಗ, ವರ್ಣ, ಜಾತಿ ಮತ್ತು ಲಿಂಗಭೇದಗಳಿಲ್ಲದ ಸಮ ಸಮಾಜ ನಿರ್ಮಾಣದ ಕ್ರಾಂತಿ ನಡೆದಿತ್ತು. ಅಲ್ಲಿ ಕಾಯಕ ಸಿದ್ಧಾಂತದ ಮೇಲೆ ನವಸಮಾಜ ಸ್ಥಾಪನೆ ಅವರ ಮೂಲಮಂತ್ರವಾಗಿತ್ತು. ಇದಕ್ಕೆ ಜಾತಿ, ಮತವೆನ್ನದೆ ತುಳಿತಕ್ಕೆ ಒಳಗಾದ ವರ್ಗದ ಮಹನೀಯರೂ ಕೈಜೋಡಿಸಿದ್ದರು. ಈ ಆಕರ್ಷಣೆಯಿಂದಾಗಿಯೇ ಚಂದಯ್ಯನವರು ಎಲ್ಲ ಬಿಟ್ಟು ಕಲ್ಯಾಣಕ್ಕೆ ಬಂದು ನುಲಿಯ ಕಾಯಕವನ್ನು ಮುಂದುವರಿಸಿದರು ಎಂದರು.
ನೂರಾರು ವರ್ಷದ ಹಿಂದೆ ಸಮಾಜ ಸುಧಾರಣೆಗೆ ವಚನಕಾರರು ದಾರಿ ತೋರಿದ್ದು, ಇಂದಿಗೂ ಪ್ರಸ್ತುತವೆನಿಸುತ್ತಿದೆ. ಒಳ್ಳೆಯ ಜೀವನ ನಡೆಸಲು ಸಮಾಜ ಸೇವೆಯೇ ಧರ್ಮವೆಂದ ನುಲಿಯ ಚಂದಯ್ಯ ನಮ್ಮ ಕಾಯಕದಲ್ಲಿ ದೇವರನ್ನು ಕಾಣಬೇಕು ಎಂದು ಪ್ರತಿಪಾದಿಸಿದ್ದರು ಎಂದರು.
ಇಡೀ ವಿಶ್ವದಲ್ಲಿ ಕಾಯಕದ ಮಹತ್ವವನ್ನು ಪ್ರತಿಪಾದಿಸಿದ ನೆಲ ನಮ್ಮ ಕನ್ನಡನಾಡು ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಮೊದಲು ಸಮಾನತೆ ಸಾರಿದ್ದೂ ಇದೇ ವಚನಕಾರರು. ಕಸುಬು ಆಧಾರಿತ ಕುಲದ ವ್ಯವಸ್ಥೆಗೆ ವಿರೋಧ ವ್ಯಕ್ತವಾಗಿದ್ದು ಕಲ್ಯಾಣದ ಶರಣರ ವೇದಿಕೆಯಲ್ಲೇ. ಕಾಯಕವೇ ಕೈಲಾಸ ಎಂಬ ಬಸವಣ್ಣನವರ ಪ್ರಭಾವ ನುಲಿಯ ಚಂದಯ್ಯನವರ ಮೇಲೆ ಬಿದ್ದಿದ್ದರಿಂದ ಕಲ್ಯಾಣವನ್ನು ಸೇರಿ, ಕಾಯಕದ ಅನುಭವದ ಮೂಲಕ ಅನುಭವ ಮಂಟಪದ ಮಟ್ಟಕ್ಕೆ ಏರುವ ಸಾಧನೆ ಮಾಡಿದ್ದರು. ಹೀಗೆ ಅನುಭವ ಮಂಟಪದಲ್ಲಿ ಕಾಯಕ ಜೀವಿಗಳ ಅನುಭವದ ಮೂಲಕ ಲಿಂಗವಂತ ಧರ್ಮದ ಅನುಭಾವ ಎಂಬ ತತ್ವಜ್ಞಾನ ಜಗತ್ತಿಗೆ ಲಭಿಸಿತು. ನುಲಿಯ ಚಂದಯ್ಯನವರಲ್ಲಿ ಅಪೂರ್ವವಾದ ಬದಲಾವಣೆ ತಂದಿತು ಎಂದು ತಿಳಿಸಿದರು.
ಕೊರಚ ಕೊರಮ ಮಹಾಸಭಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ಬಾಬು ವಿಶೇಷ ಉಪನ್ಯಾಸ ನೀಡಿದರು. ಸಮುದಾಯಕ್ಕೆ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಮುಖಂಡರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಗೀತಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯದರ್ಶಿ ಶಿವಕುಮಾರ್, ಅಖಿಲ ಕರ್ನಾಟಕ ಕೊರಚ ಕೊರಮ ಮಹಾಸಭಾ ಜಿಲ್ಲಾಧ್ಯಕ್ಷ ಶಂಕರಪ್ಪ, ಉಪಾಧ್ಯಕ್ಷ ವೆಂಕಟೇಶ್, ಮುಖಂಡ ಸಂಪತ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net