

ಬೇಲೂರು : ಮಹಾತ್ಮ ಗಾಂಧಿಯವರ ಆಶಯದಂತೆ ಯುವಕರಿಗೆ ಪರಿಶ್ರಮ ಮತ್ತು ಅನುಭವಕ್ಕೆ ರಾಷ್ಟ್ರೀಯ ಸೇವಾ ಯೋಜನೆ ಗರಡಿ ಮನೆ ಇದ್ದಂತೆ ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ಉಪನ್ಯಾಸಕ ಸಿ.ಹೆಚ್.ಲೋಕೇಗೌಡ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಸಂಸ್ಥಾಪನಾ ದಿನಾಚರಣೆ ಆಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವ್ಯಕ್ತಿಯ ವ್ಯಕ್ತಿತ್ವ ವಿಕಸನ, ಸಮಾಜ ಮುಖಿ ಚಿಂತನೆಗೆ ರಾಷ್ಟ್ರೀಯ ಸೇವಾ ಯೋಜನೆ ಸಹಕಾರಿಯಾಗಿದೆ. 1969 ರಲ್ಲಿ ಪ್ರಾರಂಭವಾದ ಘಟಕವು ಅಸಂಖ್ಯಾತ ಯುವಕರಿಗೆ ಸ್ಪೂರ್ತಿಯಾಗಿದೆ. ಬೇಲೂರಿನ ಕಾಲೇಜಿನಲ್ಲಿ ನಡೆಯುವ ಪ್ರತಿ ಶಿಬಿರಗಳು ಅರ್ಥಪೂರ್ಣ ಹಾಗೂ ಮೌಲ್ಯಾಯುತವಾಗಿದ್ದು, ಇಲ್ಲಿ ಕಲಿತವರು ತಮ್ಮ ಜೀವನದಲ್ಲಿಯೂ ಉತ್ತಮ ಸಾಧನೆ ಮಾಡುವುದಕ್ಕೆ ಸಾಧ್ಯ ಎಂದರು.
ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಹರೀಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸೇವಾ ಮನೋಭಾವ ಕಮ್ಮಿಯಾಗುತ್ತಿರುವುದು ವಿಷಾಧದ ಸಂಗತಿಯಾಗಿದೆ. ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜು ದಿನಗಳಲ್ಲೆ ಸೇವಾ ಚಟುವಟಿಕೆಗಳಲ್ಲಿ ಪ್ರೇರಣೆ ನೀಡಿದರೆ ಅವರು ಉತ್ತಮ ಸಮಾಜ ನಿರ್ಮಾಣದೊಂದಿಗೆ ತಾವೂ ಸೇವೆಯಲ್ಲಿ ತೊಡಗಿ ಕೊಳ್ಳು ರಾಷ್ಟ್ರೀಯ ಸೇವಾ ಯೋಜನೆ ಸಹಕಾರಿಯಾಗಿದೆ ಎಂದರು.
ಕಸಾಪ ಮಾಜಿ ಗೌ.ಕಾರ್ಯದರ್ಶಿ ಹೆಬ್ಬಾಳು ಹಾಲಪ್ಪ ಮಾತನಾಡಿ, ಅನಾವಶ್ಯಕವಾಗಿ ಸರ್ಕಾರ ವಿವಿಧ ಜಯಂತಿ, ಉತ್ಸವಗಳಿಗೆ ಸಾವಿರಾರೂ ಕೋಟಿ ರೂ, ವೆಚ್ಚ ಮಾಡುತ್ತಿದೆ. ಆದರೆ ವ್ಯಕ್ತಿಯ ವ್ಯಕ್ತಿತ್ವವನ್ನು ಬದಲಾಯಿಸುವ ಚೈತನ್ಯಯುತ ರಾಷ್ಟ್ರೀಯ ಸೇವಾ ಯೋಜನೆಯಂತಹ ಶಿಬಿರಕ್ಕೆ ಅಲ್ಪ ಅನುದಾನ ನೀಡುವುದರಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಇದಕ್ಕೆ ಹೆಚ್ಚಿನ ಅನುದಾನ ನೀಡಬೇಕು. ಅಲ್ಲದೆ ಕಾಲೇಜು ಹಿಂಭಾಗದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಗುಡಿಸಲು ತೆರವಿಗೆ ಜನಪ್ರತಿನಿಧಿಗಳು ಮೌನಕ್ಕೆ ಜಾರಿದ್ದರಿಂದ ವಿದ್ಯಾರ್ಥಿಗಳಿಗೆ ಪಾಠ ಪ್ರವಚನಕ್ಕೆ ತೊಂದರೆಯಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಿ ಗುಡಿಸಲು ತೆರವಿಗೆ ಮುಂದಾಗಬೇಕಿದೆ ಎಂದರು.
ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಲಕ್ಷ್ಮೀನಾರಾಯಣ, ಉಪನ್ಯಾಸಕರಾದ ಸರ್ವಮಂಗಳ, ಯೋಗೀಶ್, ವೇದಾವತಿ, ಸಾಧಿಕ್, ದೇದೀಪ್ಯ ಇದ್ದರು.