ಸಮಾಜ ಬೆಳಗಲು ಸೇವೆ ಅವಶ್ಯಕ: ಸುತ್ತೂರು ಶ್ರೀ ಆಶಯ

3
Published on

ಮೈಸೂರು: ದೀಪ ಬೆಳಗಲು ಎಣ್ಣೆ ಹೇಗೆ ಅವಶ್ಯಕವೋ ಹಾಗೆಯೇ ಸಮಾಜ ಬೆಳಗಲು ಸೇವೆ ಅವಶ್ಯಕ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಆರ್ಯ ಈಡಿಗರ ಸಂಘದಿಂದ ವಿಜಯನಗರ ಮೂರನೇ ಹಂತದಲ್ಲಿ (ಸಪ್ತಮಾತೃಕಾ ದೇವಸ್ಥಾನದ ಬಳಿ) ನೂತನವಾಗಿ ನಿರ್ಮಿಸಿರುವ ವಿದ್ಯಾರ್ಥಿನಿಲಯದ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ದೀಪಕ್ಕೆ ಎಣ್ಣೆ ಹಾಕಿದಂತೆ ಬೆಳಕು ನೀಡುವುದು ಮುಂದುವರಿಯುತ್ತದೆ. ಹಾಗೆಯೇ ಸಮಾಜದ ಬೆಳವಣಿಗೆಗೆ ಎಲ್ಲರೂ ಕೈಜೋಡಿಸಿ ಸೇವೆ ಮಾಡಬೇಕು. ಒಗ್ಗಟ್ಟಾಗಿ ನಿಂತರೆ ಏನನ್ನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಸಂಘದಿಂದ ನಿರ್ಮಾಣಗೊಂಡಿರುವ ಬೃಹತ್ ವಿದ್ಯಾರ್ಥಿನಿಲಯ ಸಾಕ್ಷಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಪತ್ತಿನಿಂದ ಜ್ಞಾನ ಸಂಪಾದಿಸಲು ಸಾಧ್ಯವಿಲ್ಲ. ಹಾಗಾಗಿ ಎಲ್ಲ ಸಮಾಜ, ಸಮುದಾಯದವರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಸಮಾಜದ ಬಡವರು, ಮಧ್ಯಮ ವರ್ಗದವರ ಮಕ್ಕಳ ಅನುಕೂಲಕ್ಕಾಗಿ ವಿದ್ಯಾರ್ಥಿನಿಲಯ ಸ್ಥಾಪಿಸಿ ಶಿಕ್ಷಣ ನೀಡುವುದು ನಿಜಕ್ಕೂ ಪುಣ್ಯದ ಕೆಲಸ ಎಂದರು.
ಕೃಷ್ಣಮೂರ್ತಿಪುರಂನಲ್ಲಿ ಇರುವ ಸಂಘದ ವಿದ್ಯಾರ್ಥಿನಿಲಯವನ್ನು ರಾಜೇಂದ್ರ ಶ್ರೀಗಳು ಉದ್ಘಾಟಿಸಿದ್ದರು. ಈಗ ನಾವು ಈ ವಿದ್ಯಾರ್ಥಿನಿಲಯ ಉದ್ಘಾಟಿಸುತ್ತಿರುವುದು ಸಂತೋಷದ ಸಂಗತಿಯಾಗಿದ್ದು, ಇದು ಶ್ರೀಮಠ ಹಾಗೂ ಈಡಿಗ ಸಮಾಜದ ನಡುವಿನ ಸಂಬಂಧವನ್ನು ಸೂಚಿಸುತ್ತದೆ ಎಂದು ಹೇಳಿದರು.
ಸಮಾಜದ ಡಾ.ರಾಜ್‌ಕುಮಾರ್ ಕಲಾಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಪುನೀತ್ ಅವರದೂ ಅಂತದ್ದೇ ವ್ಯಕ್ತಿತ್ವ. ರಾಜ್ ಕುಟುಂಬ ಮಠದೊಂದಿಗೆ ಸಂಪರ್ಕ ಹೊಂದಿದ್ದರು. ತೀರಿಕೊಳ್ಳುವ ಸಂದರ್ಭದಲ್ಲಿ ಬೆಂಗಳೂರು ಮತ್ತು ದುಬೈ ಕಾರ್ಯಕ್ರಮಕ್ಕೆ ತೆರಳುವಾಗ ಮಾತನಾಡಿಸಿದ್ದರು. ಅಂತಹ ನಟರೊಬ್ಬರನ್ನು ಬೇಗನೆ ಕಳೆದುಕೊಂಡಿದ್ದು ವಿಧಿಯಾಟ ಎಂದು ಬೇಸರ ವ್ಯಕ್ತಪಡಿಸಿದರು.
ಆರ್ಯ ಈಡಿಗೆ ಸಮಾಜಕ್ಕೆ ತನ್ನದೇ ಆದ ಇತಿಹಾಸವಿದ್ದು, ಒಳ ಪಂಗಡಗಳು ಒಗ್ಗೂಡಬೇಕು. ಸಂಘಟಿತರಾಗಿ ಕೆಲಸ ಮಾಡಬೇಕು. ಕೊಡುವುದಕ್ಕಿಂತ ಒಳ್ಳೆಯ ಮನಸ್ಸಿನಿಂದ ಕೊಡಬೇಕು. ಸಮಾಜಕ್ಕೆ ಕೊಟ್ಟಿದ್ದೇ ನಿಜವಾದ ಆಸ್ತಿ. ಸೇವೆ ಪಡೆದವರು ಪ್ರಾರ್ಥಿಸುವಾಗ ಪುಣ್ಯ ದೊರೆಯುತ್ತದೆ. ಇಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ದೊರೆಯಲಿದೆ ಎಂದು ನುಡಿದರು.
‘ವಿದ್ಯಾಸಿರಿ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಉತ್ತಮ ಶಿಕ್ಷಣ ನೀಡಲು ವಿದ್ಯಾರ್ಥಿ ನಿಲಯ ನಿರ್ಮಾಣ ಮಾಡಿರುವುದು ಸಂತೋಷದ ಸಂಗತಿ. ಐವತ್ತು ದಾನಿಗಳು 50 ಕೊಠಡಿಗಳನ್ನು ನಿರ್ಮಿಸಿಕೊಟ್ಟಿರುವುದನ್ನು ನೋಡಿದರೆ ಸಮಾಜದ ಬೆಳವಣಿಗೆಗೆ ಯಾವ ರೀತಿ ಸೇವೆ ಸಲ್ಲಿಸುತ್ತಾರೆ ಎಂಬುದು ಅರ್ಥವಾಗುತ್ತದೆ ಎಂದು ಹೇಳಿದರು.
ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಗೆ ಬರುವ ವಿಜಯನಗರದಲ್ಲಿ ಭೂಮಿ ಮಂಜೂರು ಮಾಡಿಸುವಂತೆ ಕೇಳಿದಾಗ ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಚರ್ಚಿಸಿ ಒಪ್ಪಿಗೆ ಕೊಡಿಸಿದ್ದೇನೆ. ಮುಂದಿನ ದಿನಗಳಲ್ಲಿ ನಿಲಯದ ಅಭಿವೃದ್ಧಿ, ಮೂಲಸೌಕರ್ಯಗಳನ್ನು ಒದಗಿಸಲು ಅಗತ್ಯ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.
ಸೋಲೂರು ರೇಣುಕಾ ಪೀಠದ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಡಾ.ಎಂ.ಕೆ.ಪೋತರಾಜ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷ ಡಾ.ಎಂ.ತಿಮ್ಮೇಗೌಡ, ಉಪಾಧ್ಯಕ್ಷ ಟಿ.ಶಿವಕುಮಾರ್, ಜೆಪಿಎನ್‌ಪಿ ಪ್ರತಿಷ್ಠಾನ ಗೌರವಾಧ್ಯಕ್ಷ ಜೆ.ಪಿ.ಸುಧಾಕರ್, ಜಿಲ್ಲಾ ಬಿಲ್ಲವ ಸಂಘದ ಅಧ್ಯಕ್ಷ ವೇದಕುಮಾರ್, ಮೈಸೂರು ಜಿಲ್ಲಾ ಆರ್ಯ ಈಡಿಗರ ಮಹಿಳಾ ಸಂಘದ ಅಧ್ಯಕ್ಷೆ ಸರೋಜಮ್ಮ ಪಾಪೇಗೌಡ, ಸಂಘದ ಉಪಾಧ್ಯಕ್ಷ ರಾಜಶೇಖರ ಕದಂಬ, ಪ್ರಧಾನ ಕಾರ್ಯದರ್ಶಿ ಕೆ.ಎಸ್.ಕೃಷ್ಣಮೂರ್ತಿ, ಉಪಾಧ್ಯಕ್ಷ ಟಿ.ಶಿವಣ್ಣ, ಕೆ.ರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net