

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾರ್ಥಿಗಳ ಸಾಧನೆ ಹಿಂದೆ ಶಿಕ್ಷಕರ ಶ್ರಮ ಸಾಕಷ್ಟಿದೆ. ಶಿಕ್ಷಕರ ಪ್ರೇರಣೆಯಿಂದಲೇ ವಿದ್ಯಾರ್ಥಿಗಳು ಸಮಾಜದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅಭಿಪ್ರಾಯಪಟ್ಟರು.
ನರಗದ ಜೆಎಸ್‌ಎಸ್ ಸನ್ನಿಧಿ ಕಲಾಕ್ಷೇತ್ರದಲ್ಲಿ ಜಿಪಂ, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನೋತ್ಸವ ಹಾಗೂ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ಯಶಸ್ವಿ ಸಾಧಕನ ಹಿಂದೆ ಶಿಕ್ಷಕರು ಇರುತ್ತಾರೆ. ಸಮಾಜ ಬದಲಾವಣೆಯಲ್ಲಿ ಶಿಕ್ಷಕರ ಪಾತ್ರ ಮುಖ್ಯ. ಬುದ್ಧ, ಬಸವ, ಅಂಬೇಡ್ಕರ್ ತತ್ವ, ಚಿಂತನೆಗಳನ್ನು ಹೇಳಿದರೆ ಸಾಲದು. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಒಳ್ಳೆ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಪ್ರಜಾಪ್ರಭುತ್ವ ರಕ್ಷಣೆಗೆ ಸಂವಿಧಾನ ಅತ್ಯವಶ್ಯಕವಾಗಿದ್ದು, ಅದನ್ನು ಅರಿತು ಎಲ್ಲರೂ ಸಾಗಬೇಕಿದೆ ಎಂದರು.
ಸಮಾಜದಲ್ಲಿನ ಜಾತಿ ವ್ಯವಸ್ಥೆ ತೊಡೆದು ಹಾಕಲು ಮಕ್ಕಳಿಗೆ ತಿಳಿವಳಿಕೆ ಮತ್ತು ಗುಣಮಟ್ಟದ ಶಿಕ್ಷಣವನ್ನು ಶಿಕ್ಷಕರು ನೀಡಬೇಕು. ಶಿಕ್ಷಕ ವೃತ್ತಿಗೆ ಸೇರಿ, ಸೇವೆ ಸಲ್ಲಿಸುತ್ತಿರುವ ನೀವು ಸುದೈವಿಗಳು. ಹೀಗಾಗಿ ಎಲ್ಲ ಶಿಕ್ಷಕರು ಗುಣಮಟ್ಟದ ಮತ್ತು ನೈತಿಕ ಶಿಕ್ಷಣ, ನೂತನ ಕೌಶಲಗಳಿಗೆ ಆದ್ಯತೆ ನೀಡಬೇಕು ಎಂದರು.
ದೇಶ, ಸಮಾಜದ ಜತೆಗೆ ನಾವೂ ಬದಲಾಗುತ್ತಿದ್ದೇವೆ. ನೀತಿ, ನೈತಿಕತೆ ನಮ್ಮಲ್ಲಿಲ್ಲ. ರಾಜಕಾರಣಿಗಳಿಂದ ಹಿಡಿದು ಎಲ್ಲರೂ ಕೆಟ್ಟಿದ್ದೇವೆ. ಹೆಚ್ಚಿನ ಸಾಕ್ಷರತೆ ಇದ್ದರೂ ನಮ್ಮಲ್ಲಿ ಭ್ರಷ್ಟಾಚಾರದಲ್ಲಿ ನಂ. 1 ಸ್ಥಾನದಲ್ಲಿದ್ದೇವೆ. ದೇಶ ಕಟ್ಟುವ ಕೆಲಸ ಶಿಕ್ಷಕರಿಂದಲೇ ಆಗಲಿದೆ. ಹೀಗಾಗಿ ಮಕ್ಕಳಲ್ಲಿ ಒಳ್ಳೆ ವಿಚಾರ, ಸಂಸ್ಕೃತಿ ಬಿತ್ತುವ ಕೆಲಸ ನಡೆಯಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಮುರಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿ, ತ್ಯಾಗ ಇದ್ದವ ಜಗತ್ತಿನ ಪೂಜ್ಯ ವ್ಯಕ್ತಿಯಾಗುತ್ತಾನೆ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ತಮ್ಮ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಿ ಎಂದು ಹೇಳುವ ಮೂಲಕ ದೇಶಕ್ಕೆ ಪೂಜ್ಯ ವ್ಯಕ್ತಿಯಾಗಿದ್ದಾರೆ. ಶಿಕ್ಷಕರು ಮಕ್ಕಳಿಗೆ ಒಳ್ಳೆ ಮಾರ್ಗದರ್ಶನ ನೀಡಿ ಸುಸಂಸ್ಕೃತ ವ್ಯಕ್ತಿಗಳನ್ನು ಸಮಾಜಕ್ಕೆ ನೀಡಲಿ ಎಂದರು.
ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿ.ಎಫ್. ಚುಳಕಿ ಅಧ್ಯಕ್ಷತೆ ವಹಿಸಿದ್ದರು. ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗವಾರು ತಲಾ 7 ಶಿಕ್ಷಕರು ಸೇರಿ ಒಟ್ಟು 21 ಶಿಕ್ಷಕರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಡಯಟ್ ನಿವೃತ್ತ ಪ್ರಾಚಾರ್ಯ ಎನ್.ಕೆ. ಸಾಹುಕಾರ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಎಫ್. ಸಿದ್ದನಗೌಡರ, ಶಾಲಾ ಶಿಕ್ಷಣ ಇಲಾಖೆ ಜಿಲ್ಲಾ ಯೋಜನಾ ಉಪ ಸಮನ್ವಯ ಅಧಿಕಾರಿ ಎಸ್.ಎಂ. ಹುಡೇದಮನಿ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಜಶೇಖರ ಹೊನ್ನಪ್ಪನವರ, ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಫ್.ವಿ.ಮಂಜಣ್ಣನವರ, ಪ್ರೌಢ ಶಾಲೆ ಸಹ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಜಿ.ಬಶೆಟ್ಟಿ, ಇಲಾಖೆ ವಿಷಯ ಪರಿವೀಕ್ಷಕರು, ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಕ್ಷಕರ ಸಂಘದ ವಿವಿಧ ಪದಾಧಿಕಾರಿಗಳು, ಇತರರು ಇದ್ದರು.
ಡಿಡಿಪಿಐ ಎಸ್.ಎಸ್. ಕೆಳದಿಮಠ ಸ್ವಾಗತಿಸಿದರು. ಡಾ. ಪ್ರಕಾಶ ಬುತಾಳಿ ನಿರೂಪಿಸಿದರು. ಜಿ.ಎನ್. ಮಠಪತಿ ವಂದಿಸಿದರು.