ಸಮಾಜ ಪರಿವರ್ತನೆಗೆ ಶ್ರಮಿಸಿದ ಮಹಾನ್ ದಾಸ

11 HANUR 1 B
ಮೆರವಣಿಗೆಯಲ್ಲಿ ವೀರಗಾಸೆ ಕುಣಿತ ಎಲ್ಲರ ಗಮನ ಸೆಳೆಯಿತು.
Published on

ಶಾಸಕ ಆರ್.ನರೇಂದ್ರ ಬಣ್ಣನೆ


ಹನೂರು: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಕನಕದಾಸರ ಜಯಂತಿಯನ್ನು ಶುಕ್ರವಾರ ಪಟ್ಟಣದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ವಿವಿಧ ಪುಷ್ಪಗಳಿಂದ ಸಿಂಗರಿಸಲಾಗಿದ್ದ ಬೆಳ್ಳಿ ರಥ ಉತ್ಸವ ವಾಹನದಲ್ಲಿ ಪ್ರತಿಷ್ಠಾಪಿಸಿದ್ದ ಕನಕದಾಸರ ಭಾವಚಿತ್ರಕ್ಕೆ ಶಾಸಕ ಆರ್.ನರೇಂದ್ರ ತುಂತುರು ಮಳೆಯ ನಡುವೆಯೂ ಪುಷ್ಪನಮನ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.

ಕನಕದಾಸರು ಸಮಾಜದಲ್ಲಿನ ಜಾತೀಯತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಕೀರ್ತನೆಗಳನ್ನು ರಚಿಸಿದರು. ಆ ಮೂಲಕ ಸಮಾಜ ಪರಿವರ್ತನೆಗೆ ಶ್ರಮಿಸಿದ ಮಹಾನ್ ದಾಸ ಎಂಬ ಖ್ಯಾತಿಗೆ ಒಳಗಾದರು ಎಂದು ಅವರು ಸ್ಮರಿಸಿದರು.

ಶ್ರೀ ಕೃಷ್ಣ ಪರಮಾತ್ಮನನ್ನೇ ಒಲಿಸಿಕೊಂಡು ದರ್ಶನ ಪಡೆದ ಮಹಾನು ಪುರುಷ ಕನಕದಾಸ. ಸಂಸ್ಕೃತಿಯ ಶ್ರೀಮಂತಿಕೆಯನ್ನು ವಿಶ್ವಕ್ಕೆ ಸಾರುವಲ್ಲಿ ಇವರ ಪಾತ್ರ ಬಹು ಮುಖ್ಯವಾದುದು. ಅಲ್ಲದೇ, ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯಲ್ಲಿ ಕನಕದಾಸರ ಚಿಂತನೆಗಳು ಒಂದು ಮೈಲಿಗಲ್ಲು. ಇಂತಹವರ ಆದರ್ಶ, ತತ್ವಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಅರ್ಥಪೂರ್ಣ ಮೆರವಣಿಗೆ: ಪಟ್ಟಣದ ಅರ್‌ಎಂಸಿ ಆವರಣದಿಂದ ತಮಟೆ, ಮಂಗಳವಾದ್ಯ ಹಾಗೂ ಕಲಾತಂಡದೊಂದಿಗೆ ಹೊರಟ ಮೆರವಣಿಗೆ ತುಂತುರು ಮಳೆಯ ನಡುವೆಯೂ ಮ.ಬೆಟ್ಟದ ಮುಖ್ಯ ರಸ್ತೆ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಖಾಸಗಿ ಬಸ್ ನಿಲ್ದಾಣದ ಮೂಲಕ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂತ್ಯಗೊಂಡಿತು. ವೀರಗಾಸೆ ಕುಣಿತ ಮೆರವಣಿಗೆಗೆ ಮೆರುಗು ತಂದಿತು. ಶಾಸಕ ಆರ್.ನರೇಂದ್ರ ತುಂತುರು ಮಳೆಯ ನಡುವೆಯೂ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಅಧಿಕಾರಿಗಳೂ ಹೆಜ್ಜೆ ಹಾಕಿದರು.

ತಹಸೀಲ್ದಾರ್ ಆನಂದಯ್ಯ, ಬಿಇಒ ಶಿವರಾಜು, ತಾಪಂ ಇಒ ಶ್ರೀನಿವಾಸ್, ಪಪಂ ಮುಖ್ಯಾಧಿಕಾರಿ ಮೂರ್ತಿ, ಶಿರಸ್ತೇದಾರ್ ನಾಗೇಂದ್ರ, ಆರ್‌ಐ ನಾಗೇಂದ್ರ, ಗ್ರಾಮಲೆಕ್ಕಿಗ ಶೇಷಣ್ಣ, ಪಪಂ ಸದಸ್ಯರಾದ ಸಂಪತ್‌ಕುಮಾರ್, ಮಹೇಶ್, ಮಹೇಶ್‌ನಾಯ್ಕ, ಗ್ರಾಪಂ ಅಧ್ಯಕ್ಷೆ ಸುಧಾ, ತಾಪಂ ಮಾಜಿ ಅಧ್ಯಕ್ಷ ಮುರುಡೇಶ್ವರಸ್ವಾಮಿ, ಮಾಜಿ ಸದಸ್ಯ ನಟರಾಜು, ಮುಖಂಡರಾದ ಅಜ್ಜೀಪುರದ ನಾಗರಾಜು, ಕಣ್ಣೂರು ಜಗಧೀಶ್, ಜಿ.ಕೆ.ಹೊಸೂರು ಮಹದೇವಸ್ವಾಮಿ, ಆರ್.ಎಸ್.ದೊಡ್ಡಿ ನಾಗರಾಜು, ಮಂಜು, ಚಂದ್ರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net