ಸಮಾಜ ನಿರ್ಮಾಣಕ್ಕೆ ಶಿಕ್ಷಣ ದಾರಿದೀಪ

Published on

ಚನ್ನರಾಯಪಟ್ಟಣ: ನಾಗರಿಕ ಸಮಾಜ ನಿರ್ಮಾಣಕ್ಕೆ ಆರೋಗ್ಯ ಮತ್ತು ಶಿಕ್ಷಣ ದಾರಿದೀಪ ಎಂದು ಹೈಕೋರ್ಟ್ ನ್ಯಾಯಾಧೀಶ ಎಚ್.ಪಿ. ಸಂದೇಶ್ ಹೇಳಿದರು.

ಪಟ್ಟಣದ ಬಿಜಿಎಸ್ ಸಮುದಾಯ ಭವನದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠ, ನಾಗರಿಕ ವೇದಿಕೆ, ಹಾಸನ ಮತ್ತು ಚನ್ನರಾಯಪಟ್ಟಣ ವಕೀಲರ ಸಂಘದ ಸಹಯೋಗದಲ್ಲಿ ಶುಕ್ರವಾರ ಪಟ್ಟಣದ ಬಿಜಿಎಸ್ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಹೈಕೋರ್ಟ್ ನಿವೃತ್ತ ನ್ಯಾಯಧೀಶ ದಿವಂಗತ ಕೆ.ಎಲ್. ಮಂಜುನಾಥ್ ಸಂಸ್ಮರಣೆ ಮತ್ತು ಸತ್ಯಮಾರ್ಗಿ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಜೀವಿತಾವಧಿಯಲ್ಲಿ ಸಮಾಜಕ್ಕೆ ಕೊಡುಗೆ ಸಲ್ಲಿಸಬೇಕು, ಒಳಿತು ಮಾಡಬೇಕು. ಜೀವನ ಸಾರ್ಥಕತೆ ಪಡೆದುಕೊಳ್ಳಬೇಕಾದರೆ ಸಮಾಜಮುಖಿ ಚಿಂತನೆ ಅಗತ್ಯ. ನಿವೃತ್ತ ನ್ಯಾಯಾಧೀಶ ಕೆ.ಎಲ್. ಮಂಜುನಾಥ್ ಅವರು ಬಡಜನರ ಕಷ್ಟಗಳಿಗೆ ಮರುಗುತ್ತಿದ್ದರು. ದೀನದಲಿತರಿಗೆ ನೆರವಾಗಿದ್ದರು. ಉದಾತ್ತ ಗುಣವನ್ನು ಅವರು ಹೊಂದಿದ್ದರು ಎಂದು ಹೇಳಿದರು.

ಬಡವರಿಗೆ ಸ್ಪಂದಿಸುವ ಹೃದಯ ಶ್ರೀಮಂತಿಕೆ ಇರಬೇಕು. ಸ್ವಾಭಿಮಾನದಿಂದ ಬದುಕುಸಾಗಿಸಬೇಕು ಎಂದ ಅವರು, ಮಕ್ಕಳಿಗೆ ವಿದ್ಯೆ ಮತ್ತು ಸಂಸ್ಕಾರ ಕೊಡಬೇಕು. ಮಕ್ಕಳಿಗಾಗಿ ಆಸ್ತಿಮಾಡದೇ ಅವರನ್ನು ದೇಶದ ಆಸ್ತಿಯನ್ನಾಗಿ ರೂಪಿಸಬೇಕು. ಆಗ ಎಂಥ ಸಂದಿಗ್ಧ ಪರಿಸ್ಥಿತಿ ಎದುರಾದರು ನಿಭಾಯಿಸುವ ಸಾಮರ್ಥ್ಯ ಅವರಲ್ಲಿ ಇರುತ್ತದೆ ಎಂದು ಹೇಳಿದರು.

ಆದಿಚುಂಚನಗಿರಿ ಮಠಾಧೀಶ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿ ಮಾತನಾಡಿ, ಬದುಕಿನಲ್ಲಿ ತತ್ವ, ಆದರ್ಶಗಳು ಮುಖ್ಯವಾದುವು. ಮಕ್ಕಳಿಗೆ ಮಾದರಿಯಾಗುವಂತೆ ಜೀವನ ನಡೆಸಬೇಕು. ನೊಂದವರ ನೆರವಿಗೆ ಧಾವಿಸಬೇಕು ಎಂದು ನುಡಿದರು.

ನಿವೃತ್ತ ನ್ಯಾಯಾಧೀಶ ಕೆ.ಎಲ್. ಮಂಜುನಾಥ್ ಕೃತಿ ಕುರಿತು ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಎಚ್.ಎಲ್. ಮಲ್ಲೇಶಗೌಡ, ನಿವೃತ್ತ ಸಹಪ್ರಾಧ್ಯಾಪಕ ಜಿ.ಬಿ. ಶಿವರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ಆದಿಚುಂಚನಗಿರಿ ಶಾಖಾ ಮಠಾಧೀಶ ಶಂಭುನಾಥ ಸ್ವಾಮೀಜಿ, ಕೆ.ಎಲ್. ಮಂಜುನಾಥ್ ಪತ್ನಿ ಪುಷ್ಪಕಲಾ, ಪುತ್ರ ಕೆ.ಎಂ. ದರ್ಪಣ್, ರಾಜ್ಯಮಕ್ಕಳ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿ.ಎನ್. ಅಶೋಕ್, ಹಾಸನ ವಕೀಲರ ಸಂಘದ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ಕಾರ್ಯದರ್ಶಿ ರಂಗಸ್ವಾಮಿ, ಚನ್ನರಾಯಪಟ್ಟಣ ವಕೀಲರ ಸಂಘದ ಅಧ್ಯಕ್ಷ ಕೆ.ಎನ್. ಕುಮಾರಸ್ವಾಮಿ, ಕಾರ್ಯದರ್ಶಿ ಕೆ.ಆರ್.ವಿಶ್ವನಾಥ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net