

ಬೈಲಹೊಂಗಲ: ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಶಿವಶರಣ ನುಲಿಯ ಚಂದಯ್ಯ ಅವರ 916ನೇ ಜಯಂತಿ ಆಚರಿಸಲಾಯಿತು.
ತಹಸೀಲ್ದಾರ್ ಸಚ್ಚಿದಾನಂದ ಕುಚನೂರ ನುಲಿಯ ಚಂದಯ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, 12ನೇ ಶತಮಾನದ ಬಸವಾದಿ ಪ್ರಮಥರು ಸಮಕಾಲೀನ ಚಂದಯ್ಯ ಅವರು ಬಸವಣ್ಣನವರ ವಿಚಾರಧಾರೆಯಿಂದ ಪ್ರಭಾವಿತರಾಗಿ ಕಲ್ಯಾಣದ ಶಿವಾನುಭವ ಮಂಟಪಕ್ಕೆ ಬಂದು ಸೇರಿದರು.
ಸಮಾಜದ ಅಂಕುಡೊಂಕು ತಿದ್ದುವಲ್ಲಿ ಅವರ ವಚನಗಳು ಸಹಕಾರಿಯಾಗಿವೆ. ಸಮುದಾಯದವರು ಮೂಲ ವೃತ್ತಿ ಜತೆಗೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಸರ್ಕಾರದ ಸೌಲಭ್ಯ ಪಡೆದು ಮುಖ್ಯವಾಹಿನಿಗೆ ಬರಬೇಕು ಎಂದರು.
ಮುಖಂಡರಾದ ಪ್ರಭಾಕರ ಭಜಂತ್ರಿ ಮಾತನಾಡಿ, ಶಿವಶರಣ ನುಲಿಯ ಚಂದ್ರಯ್ಯ ಅವರ ಸಮಾಜ ಸುಧಾರಣಾ ಕಾರ್ಯಗಳು ಇಂದಿಗೂ ಪ್ರಸ್ತುತವಾಗಿದ್ದು, ಅವರ ಆದರ್ಶ ಎಲ್ಲರಿಗೂ ಪ್ರೇರಣೆಯಾಗಿವೆ ಎಂದರು.
ಸದಾಶಿವಶಾಸ್ತ್ರಿ ಪತ್ರಿಮಠ, ಬಾಳಪ್ಪ ಭಜಂತ್ರಿ, ಭೂಶೆಪ್ಪ ಭಜಂತ್ರಿ, ಯಲ್ಲಪ್ಪ ಭಜಂತ್ರಿ, ಮನೋಜ ಕೆಳಗೇರಿ, ಸಂಜು ಭಜಂತ್ರಿ, ಹನುಮಂತ ಭಜಂತ್ರಿ, ಬಸವಂತ ಭಜಂತ್ರಿ ಇತರರು ಇದ್ದರು.