

ಬಸವಕಲ್ಯಾಣ: ಬಸವಣ್ಣನವರ ವಿಚಾರಧಾರೆ, ಶರಣರ ತತ್ವವನ್ನು ಮನೆ-ಮನಗಳಿಗೆ ಮುಟ್ಟಿಸಿ ಬಸವ ಧ್ವಜ ಹಾರಿಸಿದ ಕೀರ್ತಿ ಪೂಜ್ಯ ಲಿಂಗಾನಂದ ಸ್ವಾಮೀಜಿ ಹಾಗೂ ಪೂಜ್ಯ ಮಾತೆ ಮಹಾದೇವಿ ಅವರಿಗೆ ಸಲ್ಲುತ್ತದೆ. ಬಸವ ತತ್ವ ಪ್ರಚಾರ-ಪ್ರಸಾರ ಮೂಲಕ ಸಮಾಜ ಕಟ್ಟಿದ ಅವರು ಶ್ರೇಷ್ಠ ಶಿವಯೋಗಿಗಳು ಮತ್ತು ತತ್ವ ಜ್ಞಾನಿಗಳು ಎಂದು ಹುಲಸೂರಿನ ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿ ಬಣ್ಣಿಸಿದರು.
ನಗರದ ಬಸವ ಮಹಾಮನೆ ಪರಿಸರದ ೧೦೮ ಅಡಿ ಎತ್ತರದ ಬಸವ ಪುತ್ಥಳಿ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಮಹಾ ಜಗದ್ಗುರು ಪೂಜ್ಯ ಡಾ.ಮಾತೆ ಮಹಾದೇವಿ ಅವರ ೭೯ನೇ ಜಯಂತಿ ಹಾಗೂ ೬ನೇ ಲಿಂಗೈಕ್ಯ ಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿದ ಶ್ರೀಗಳು, ಬಸವ ಧರ್ಮ ಪ್ರಚಾರ, ಸಮಾಜ ಕಟ್ಟುವ ಮಠಾಧೀಶರು, ಧರ್ಮಗುರುಗಳ ಅವಶ್ಯಕತೆ ಹಿಂದೆಂದಿಗಿಂದೂ ಇಂದು ಹೆಚ್ಚಾಗಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ, ಬಸವಕಲ್ಯಾಣದಲ್ಲಿ ಹಿಂದೆ ನಡೆದ ಬಸವಣ್ಣನವರ ಅಷ್ಟ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ಪೂಜ್ಯ ಲಿಂಗಾನಂದ ಅಪ್ಪಾಜಿ ಹಾಗೂ ಮಾತಾಜಿ ಆಗಮಿಸಿದ್ದರು. ಬಸವ ಧರ್ಮದಲ್ಲಿ ಸಮಾನತೆ ಕಲ್ಪಿಸಿದ್ದರಿಂದ ಮಹಿಳೆಯರು ಜಗದ್ಗುರು ಆಗಬಹುದು ಎಂದು ಮಾತಾಜಿ ಹೇಳಿದ್ದರು. ಮುಂದೆ ಅವರು ಬಸವ ಧರ್ಮ ಪೀಠ ಸ್ಥಾಪಿಸಿದರು. ಭಾರತ ಮಾತ್ರವಲ್ಲ ೧೬ ರಾಷ್ಟ್ರಗಳಲ್ಲಿ ಸಂಚರಿಸಿ ಬಸವ ತತ್ವ ಪ್ರಚಾರ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಸ್ಮರಿಸಿದರು.
ಸರ್ಕಾರಿ ಪದವಿ ಕಾಲೇಜು ಉಪನ್ಯಾಸಕಿ ಮೀನಾಕ್ಷಿ ಬಿರಾದಾರ ಮಾತನಾಡಿ, ಸ್ತ್ರೀ ಸಮಾನತೆ ಕಲ್ಪಿಸಿದ್ದು ಬಸವ ಧರ್ಮ. ಗುರು ಬಸವಣ್ಣನವರ ನೇತೃತ್ವದಲ್ಲಿ ಅಂದಿನ ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಲಾಗಿತ್ತು. ಮಹಾ ಜಗದ್ಗುರು ಮಾತಾಜಿ ಮಹಿಳಾ ಜಗದ್ಗುರು ಪೀಠ ಸ್ಥಾಪಿಸಿದ್ದು ಐತಿಹಾಸಿಕ. ಬಸವ ತತ್ವ ಪ್ರಸಾರ-ಪ್ರಸಾರಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದ ಅವರು ಮನಸ್ಸುಗಳನ್ನು ಕಟ್ಟಿದ ಮಹಾ ಮಾತೆ ಎಂದು ಹೇಳಿದರು.
ಹಿರಿಯ ಸಾಹಿತಿ ಡಾ.ಸೋಮನಾಥ ಯಾಳವಾರ ಅನುಭಾವ ನೀಡಿ, ಬಸವ ತತ್ವ ಪ್ರಚಾರ-ಪ್ರಸಾರದ ಜತೆಗೆ ನಿಜವಾದ ಬಸವ ಪ್ರಜ್ಞೆ ಬೆಳಸಿದ ಕೀರ್ತಿ ಲಿಂಗಾನಂದ ಅಪ್ಪಾಜಿ ಹಾಗೂ ಮಾತಾಜಿ ಅವರಿಗೆ ಸಲ್ಲುತ್ತದೆ ಎಂದರು.
ಸವದತ್ತಿಯ ಶ್ರೀ ಬಸವ ದೇವರು ಮಾತನಾಡಿದರು. ಪೂಜ್ಯ ಮಾತೆ ಸತ್ಯಕ್ಕ, ಪೂಜ್ಯ ಮಾತೆ ಗಿರಿಜಮ್ಮ, ಪೂಜ್ಯ ಮಾತೆ ಸುಜ್ಞಾನಿ, ಪೂಜ್ಯ ಮಾತೆ ಲಾವಣ್ಯ ಸಮ್ಮುಖ ವಹಿಸಿದ್ದರು. ನಿವೃತ್ತ ನ್ಯಾಯಾಧೀಶ ಸುಭಾಷಚಂದ್ರ ನಾಗರಾಳೆ, ಹಿರಿಯ ನಾಗರಿಕರ ಒಕ್ಕೂಟದ ಅಧ್ಯಕ್ಷ ಚನ್ನಬಸಪ್ಪ ಪರ್ತಾಪುರೆ, ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ರಾಜಶ್ರೀ ಖೂಬಾ, ಕದಳಿ ವೇದಿಕೆ ಅಧ್ಯಕ್ಷೆ ಸುಲೋಚನಾ ಗುದಗೆ, ಚನ್ನಬಸಪ್ಪ ವಡ್ಡನಕೆರೆ ಇತರರಿದ್ದರು.
ಜಯಶ್ರೀ ಪಾಟೀಲ್ ಸ್ವಾಗತಿಸಿದರು. ರಾಷ್ಟ್ರೀಯ ಬಸವದಳ ತಾಲೂಕು ಅಧ್ಯಕ್ಷ ರವೀಂದ್ರ ಕೋಳಕುರ ವಂದಿಸಿದರು. ಶಿವಶರಣಪ್ಪ ವಲ್ಲೇಪುರಿ ನಿರೂಪಣೆ ಮಾಡಿದರು. ಸುಜಾತಾ ತೊಗರಖೇಡೆ, ಸಂಗೀತಾ ಖಂಡಾಲೆ ವಚನ ಸಂಗೀತ ನಡೆಸಿಕೊಟ್ಟರು. ಅಕ್ಕನಾಗಲಾಂಬಿಕಾ ಮಹಿಳಾ ಗಣದಿಂದ ಪುಷ್ಪನಮನ ಸಲ್ಲಿಸಲಾಯಿತು.
ಪೂಜ್ಯ ಲಿಂಗಾನಂದ ಸ್ವಾಮೀಜಿ ಹಾಗೂ ಮಾತಾಜಿ ಮಠಗಳನ್ನು ಕಟ್ಟಲಿಲ್ಲ, ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆ ಕಟ್ಟಲಿಲ್ಲ. ಸಮಾಜ ಕಟ್ಟುವ ಮಹತ್ವದ ಕಾರ್ಯ ಮಾಡಿದ್ದಾರೆ. ನಾಡು, ದೇಶದ ಮೂಲೆ ಮೂಲೆಯಲ್ಲಿ ಬಸವ ತತ್ವ ಪ್ರಚಾರ-ಪ್ರಸಾರ ಮಾಡಿದ್ದಾರೆ. ಅವರು ನೀಡಿದ ಕೊಡುಗೆ, ಮಾಡಿದ ಕಾರ್ಯ ಅವಿಸ್ಮರಣೀಯ.
| ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿ
ಹುಲಸೂರು ಗುರುಬಸವೇಶ್ವರ ಸಂಸ್ಥಾನ ಮಠ