

ಹೊನ್ನಾವರ: ತಾಲೂಕಿನ ಗುಣವಂತೆಯ ಯಕ್ಷಾಂಗಣದಲ್ಲಿ ಸೋಮವಾರ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದ ಐದನೇ ದಿನದ ಕಾರ್ಯಕ್ರಮದಲ್ಲಿ ಚೆನ್ನೈನ ಖ್ಯಾತ ಭರತನಾಟ್ಯ ಕಲಾವಿದೆ ಪದ್ಮಭೂಷಣ ಡಾ. ಪದ್ಮಾ ಸುಬ್ರಹ್ಮಣ್ಯಂ ಅವರಿಗೆ ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಮಾಜ ಉನ್ನತೀಕರಿಸುವ ಜವಾಬ್ದಾರಿಯ ಭಾಗವಾಗಿ ಯಕ್ಷಗಾನವನ್ನು ಸಮೃದ್ಧಿಗೊಳಿಸುವ ಅನಿವಾರ್ಯತೆ ಇದೆ ಎಂದರು.
ಪತ್ರಕರ್ತ ವಿನಾಯಕ ಭಟ್ ಮೂರೂರು ಮಾತನಾಡಿ, ಮನರಂಜನೆಯ ಕಲ್ಪನೆಯೇ ಇಲ್ಲದ ಮತ್ತು ವಿವಿಧ ಸಾಧನ ಇಲ್ಲದ ಕಾಲದಲ್ಲಿ ಯಕ್ಷಗಾನ ಒಂದೇ ಮನರಂಜನೆಯ ಸಾಧನವಾಗಿತ್ತು. ಬಾಲ್ಯದ ದಿನಗಳಲ್ಲಿ ಯಕ್ಷಗಾನದ ಟೆಂಟ್ ಊರಿಗೆ ಬಂತೆಂದರೆ ಜಾತ್ರೆಯ ಸಂಭ್ರಮವಿರುತ್ತಿತ್ತು. ಕಾಲ ಕಳೆದಂತೆ ಮನರಂಜನೆಗಾಗಿ ಟಿವಿ, ಮೊಬೈಲ್ ಫೋನ್ ಸೇರಿ ಹಲವಾರು ಸಾಧನಗಳು ಕಾಲಿಟ್ಟರೂ ಯಕ್ಷಗಾನ ತನ್ನತನವನ್ನು ಕಳೆದುಕೊಳ್ಳಲಿಲ್ಲ ಎಂದರು.
ಅದಮ್ಯ ಚೇತನ ಟ್ರಸ್ಟ್ನ ತೇಜಸ್ವಿನಿ ಅನಂತಕುಮಾರ ಮಾತನಾಡಿ, ಯಕ್ಷಗಾನದಲ್ಲಿ ಭಾರತೀಯ ಪರಂಪರೆಯ ಅರಿವು ಮೂಡಿಸುವ ಪಾತ್ರವಿದೆ. ಭಾರತದ ಅದ್ಭುತ ಪರಂಪರೆಯನ್ನು ಕಲಾವಿದರು ಕಟ್ಟಿಕೊಡುತ್ತಾರೆ. ನಗರ ಭಾಗದ ಜನರು ಗ್ರಾಮೀಣ ಪ್ರದೇಶದ ಕಡೆಗೆ ಬಂದು ಕಲೆಯನ್ನು ಆಸ್ವಾದಿಸಬೇಕು ಎಂದರು.
ಚಿತ್ರನಟ ನೀರನಳ್ಳಿ ರಾಮಕೃಷ್ಣ ಮಾತನಾಡಿ, ಭರತನಾಟ್ಯ ಕಲಾವಿದೆ ಪದ್ಮಾ ಸುಬ್ರಹಣ್ಯಂ ಅವರಿಗೆ ಪ್ರಶಸ್ತಿ ನೀಡಿರುವುದು ಹೆಮ್ಮೆಯ ವಿಷಯವಾಗಿದೆ. ಖ್ಯಾತ ಕಲಾವಿದೆಯಾಗಿರುವ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಬೇಕು ಎಂದರು.
ಶ್ರೀಮಯ ಕಲಾಪೋಷಕ ಪ್ರಶಸ್ತಿಯನ್ನು ಕುಂದಾಪುರದ ಗೀತಾ ಎಚ್ಎಸ್ಎನ್ ಫೌಂಡೇಶನ್ನ ಎ. ಶಂಕರ ಐತಾಳ ಅವರಿಗೆ ಪುರಸ್ಕರಿಸಲಾಯಿತು. ಸಂಸ್ಕಾರ ಭಾರತೀಯ ಪ.ರಾ. ಕೃಷ್ಣಮೂರ್ತಿ, ವಿದ್ವಾಂಸ ಎಂ.ಎ. ಹೆಗಡೆ ಉಪಸ್ಥಿತರಿದ್ದರು. ನಾಟ್ಯೋತ್ಸವ ಸಮಿತಿ ಕಾರ್ಯಾಧ್ಯಕ್ಷ ಲಕ್ಷ್ಮೀನಾರಾಯಣ ಕಾಶಿ ಸ್ವಾಗತಿಸಿದರು. ಕೆರೆಮನೆ ಶಿವಾನಂದ ಹೆಗಡೆ ವಂದಿಸಿದರು.
ಭರತಮುನಿಯ ನಾಟ್ಯಶಾಸ್ತ್ರ ಜಂಬೂದ್ವೀಪದವರೆಗೆ: ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪದ್ಮಾ ಸುಬ್ರಹ್ಮಣ್ಯಂ ಅವರು, ‘ಕಲೆಯಲ್ಲಿ ನಮ್ಮ ಸಂಸ್ಕೃತಿ ಅಡಗಿದೆ. ಕಲೆಯ ಇತಿಹಾಸವನ್ನು ಮತ್ತೆ ಅವಲೋಕಿಸುವ ಅವಶ್ಯಕತೆಯಿದೆ. ನಾನು ಪ್ರಕೃತಿಯ ಎಲ್ಲಾ ಚರಾಚರಗಳಲ್ಲಿ ನೃತ್ಯದ ಭಾವವನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಾ ನನ್ನ ನೃತ್ಯಕ್ಕೆ ಪೂರಕವಾಗಿಸುತ್ತೇನೆ. ಭರತಮುನಿಯ ನಾಟ್ಯಶಾಸ್ತ್ರ ಜಂಬೂ ದ್ವೀಪದವರೆಗೆ ವಿಸ್ತರಿಸಿದೆ ಎಂದರು. ಸ್ವಾಮಿ ವಿದ್ಯಾರಣ್ಯರು ಸಾಂಸ್ಕೃಕ ಕ್ಷೇತ್ರವನ್ನು ಶ್ರೀಮಂತಗೊಳಿಸಿದರು. ಭಾರತೀಯತೆಯೊಂದಿಗೆ ಏಕತೆಯನ್ನು ಈ ಸಾಂಸ್ಕೃಕ ಲೋಕ ನಿರ್ವಿುಸುತ್ತದೆ ಎಂದರು. ಪ್ರಶಸ್ತಿ ಪುರಸ್ಕೃರ ಪರವಾಗಿ ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಅವರು ಅಭಿನಂದಿಸಿ ಮಾತನಾಡಿದರು.