ಸಮಸ್ಯೆಗೆ ಸ್ಪಂದಿಸುವವರು ನಾಯಕರಾಗಬಲ್ಲರು

BJP
Published on

ಚಿತ್ರದುರ್ಗ: ಸಂಸದರು, ಶಾಸಕರಿಗಿಂತಲೂ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಜನಸಾಮಾನ್ಯರಿಗೆ ಹತ್ತಿರವಿರುತ್ತಾರೆ. ಹೀಗಾಗಿ ಸಮಸ್ಯೆಗಳಿಗೆ ತಕ್ಷಣ ನಿಮ್ಮನ್ನೇ ಸಂಪರ್ಕಿಸುತ್ತಾರೆ. ಅದಕ್ಕೆ ಸ್ಪಂದಿಸಿ, ಬಗೆಹರಿಸುವವರು ಮುಂದೆ ನಾಯಕರಾಗುವುದು ನಿಶ್ಚಿತ ಎಂದು ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.

ಇಂಡಿಯನ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಗಳ ವಿಭಾಗ ಮಟ್ಟದ ಬಿಜೆಪಿಯ ಪುರಸಭೆ, ಪಪಂ ಸದಸ್ಯರಿಗೆ ಭಾನುವಾರ ಹಮ್ಮಿಕೊಂಡಿದ್ದ ಒಂದು ದಿನದ ಪ್ರಶಿಕ್ಷಣ ವರ್ಗ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ರಾಜಕೀಯ ಜೀವನದಲ್ಲಿ ಉತ್ತಮ ಭವಿಷ್ಯ ಕಂಡುಕೊಳ್ಳಲು ಸ್ಥಳೀಯ ಸಂಸ್ಥೆಗಳಿಗೆ ಆಯ್ಕೆಯಾದ ಜನಪ್ರತಿನಿಧಿಗಳು ಉತ್ಸಾಹದಿಂದ ಕೆಲಸ ಮಾಡಬೇಕು. ಆಗ ವರ್ಚಸ್ಸು ಇನ್ನಷ್ಟು ಇಮ್ಮಡಿಗೊಳ್ಳಲಿದೆ ಎಂದರು.

ಕೇಂದ್ರ ಸರ್ಕಾರದ ಅಮೃತ್ ನಗರ, ನಗರೋತ್ಥಾನ, ಜಲ ಜೀವನ ಮಿಷನ್ ಯೋಜನೆಗಳಡಿ ಸ್ಥಳೀಯ ಸಂಸ್ಥೆಗಳಿಗೆ ಅನುದಾನ ಬಂದಿದೆ. ಪರಿಣಾಮಕಾರಿಯಾಗಿ ಕೆಲಸ ಮಾಡಿ, ಜನರ ಪ್ರೀತಿ, ವಿಶ್ವಾಸ ಗಳಿಸಬೇಕು. ಕೊಳೆಗೇರಿ ನಿವಾಸಿಗಳಿಗೆ ಹಕ್ಕುಪತ್ರ ಕೊಡಿಸುವ ಮೂಲಕ ನೆರವಾಗಬೇಕು. ಇದರಿಂದ ರಾಜಕೀಯದಲ್ಲಿ ಹಂತ-ಹಂತವಾಗಿ ಬೆಳೆಯಲು ಸಹಕಾರಿಯಾಗಲಿದೆ ಎಂದು ಸಲಹೆ ನೀಡಿದರು.

ರಾಷ್ಟ್ರಾಭಿಮಾನ, ದೇಶದ ಹಿತದೃಷ್ಠಿಯಿಂದ ಸ್ಥಾಪಿತವಾದ ಬಿಜೆಪಿ ಇಂದಿಗೂ ಅದೇ ದಾರಿಯಲ್ಲಿ ಸಾಗುತ್ತಿದೆ. ಹೀಗಾಗಿ ಈ ಪಕ್ಷದಲ್ಲಿ ಇರುವುದೇ ನಮಗೆಲ್ಲರಿಗೂ ಹೆಮ್ಮೆಯ ಸಂಗತಿ. ಶ್ಯಾಮ ಪ್ರಸಾದ್ ಮುಖರ್ಜಿ, ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಅವರ ಕೊಡುಗೆ ಅಪಾರ. ಈ ಮಹನೀಯರ ಆಶಯಗಳನ್ನು ಕ್ರಾಂತಿಕಾರಕ ಬದಲಾವಣೆಗಳ ಮೂಲಕ ಪ್ರಧಾನಿ ನರೇಂದ್ರ ಮೋದಿ ಈಡೇರಿಸಿದ್ದಾರೆ. ಹೀಗಾಗಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಕಾರ್ಯಕರ್ತರೂ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಿ, ಗೆಲ್ಲಿಸಬೇಕು ಎಂದು ಕಿವಿಮಾತು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ವಿಧಾನ ಪರಿಷತ್ ಮಾಜಿ ಸದಸ್ಯ ಸಿದ್ದರಾಮಣ್ಣ, ಬಿಜೆಪಿ ಪ್ರಶಿಕ್ಷಣ ಪ್ರಕೋಷ್ಟದ ರಾಜ್ಯ ಸಮಿತಿ ಸದಸ್ಯೆ ಮಂಜುಳಾ ಎ. ರಾವ್ ಇತರರಿದ್ದರು. ಮೂರು ಜಿಲ್ಲೆಗಳ ಪುರಸಭೆ, ಪಪಂ ಸದಸ್ಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net