ಸಮಸ್ಯೆಗೆ ಸ್ಪಂದಿಸದ ಪಿಡಿಒ, ಸಿಬ್ಬಂದಿ

06BTP01.
ಬೆಟ್ಟದಪುರ ಸಮೀಪದ ದೊಡ್ಡಕಮರಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಎದುರು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
Published on

ಬೆಟ್ಟದಪುರ: ಸಮೀಪದ ದೊಡ್ಡಕಮರಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಪಿಡಿಒ ಸೇರಿದಂತೆ ಸಿಬ್ಬಂದಿ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಮಂಗಳವಾರ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು.

ಗ್ರಾಪಂ ಕಚೇರಿ ಮುಂದೆ ಜಮಾವಣೆಗೊಂಡ ಗ್ರಾಮಸ್ಥರು ಮತ್ತು ಸಾರ್ವಜನಿಕರು, ಗ್ರಾಮದಲ್ಲಿ ಗ್ರಾಮದೇವತೆ ಹಬ್ಬ ಇದ್ದರೂ ಸ್ವಚ್ಛತೆಗೆ ಪಂಚಾಯಿತಿಯವರು ಮುಂದಾಗಲಿಲ್ಲ. ಅಲ್ಲದೆ ಪಿಡಿಒ ಶಿಲ್ಪಶ್ರೀ ಹಬ್ಬ ಇರುವುದು ಗೊತ್ತೇ ಇಲ್ಲ ಎನ್ನುತ್ತಾರೆ ಎಂದು ಕಿಡಿಕಾರಿದರು.

ಮನೆಯ ಇ-ಸ್ವತ್ತು ಮಾಡಿಕೊಡಲು ಐದರಿಂದ ಹ್ತತು ಸಾವಿರ ಹಾಗೂ ಜಿಪಿಎಸ್ ಮಾಡುವುದಕ್ಕೆ ಐದು ನೂರು ಲಂಚ ಕೇಳುತ್ತಾರೆ. ಬಡವರು ಎಲ್ಲಿಂದ ಹಣ ತಂದು ಕೊಡಬೇಕು. ಇವರಿಗೆ ಸರ್ಕಾರ ಸಂಬಳ ನೀಡುವುದಿಲ್ಲವೇ. ಜನರು ಸಮಸ್ಯೆ ಹೇಳುವುದಕ್ಕೆ ಬಂದರೆ ಕಚೇರಿಯಲ್ಲಿ ಅಧಿಕಾರಿಗಳೇ ಇರುವುದಿಲ್ಲ. ನಿಜವಾದ ಫಲಾನುಭವಿಗಳಿಗೆ ಸರ್ಕಾರದ ಯಾವುದೇ ಅನುದಾನ ದೊರೆಯುತ್ತಿಲ್ಲ. ಮಾಹಿತಿ ಕೇಳಿದರೆ ಅಸಡ್ಡೆ ಮಾತುಗಳನ್ನು ಆಡುತ್ತಾರೆ. ಅವರಿಗೆ ಬೇಕಾದ ಮನೆಯವರಿಗೆ ನೀರು ಬಿಡುವುದು, ಪಂಚಾಯಿತಿ ಕಾಮಗಾರಿಗಳನ್ನು ಮಾಡಿಕೊಳ್ಳುವುದಕ್ಕೆ ಸಹಕಾರ ನೀಡುತ್ತಾರೆ. ಇದನ್ನು ಪಿಡಿಒ ಬಳಿ ಪ್ರಶ್ನೆ ಮಾಡಿದರೆ ಬೇಜವಾಬ್ದಾರಿ ಉತ್ತರ ನೀಡುತ್ತಾರೆ ಎಂದು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಗ್ರಾಮಗಳಲ್ಲಿ ಸ್ವಚ್ಛತೆಯೊಂದಿಗೆ ನೈರ್ಮಲ್ಯತೆ ಕಾಪಾಡುವ ಉದ್ದೇಶದಿಂದ ಮನೆಮನೆಗೆ ಕಸದ ಬಕೆಟ್ ವಿತರಣೆ ಮಾಡುವುದಕ್ಕೆ ಚಾಲನೆ ನೀಡಿದೆ. ಆದರೆ ಇಷ್ಟು ದಿನ ಕಳೆದರೂ ಪಂಚಾಯಿತಿ ವ್ಯಾಪ್ತಿಯ ಒಂದು ಮನೆಗೂ ಒಂದು ಬಕೆಟ್ ಕೂಡ ನೀಡಿಲ್ಲ. ಕಸ ವೀಲೇವಾರಿ ವಾಹನ ನಿಂತಲ್ಲೇ ನಿಂತಿದೆ. ಗ್ರಂಥಾಲಯದಲ್ಲಿ ಸರಿಯಾದ ನಿರ್ವಹಣೆ ಇಲ್ಲ. ಒಂದು ದಿನವೂ ಬಾಗಿಲು ತೆರೆದಿಲ್ಲ. ಅಲ್ಲಿಗೆ ಬರುವ ದಿನಪ್ರತಿಕೆಗಳು ಬೇರೆಯವರ ಪಾಲಾಗುತ್ತಿದೆ. ಈ ಸಂಬಂಧ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ನಮಗೆ ಇಂತಹ ಪಿಡಿಒ ಹಾಗೂ ಸಿಬ್ಬಂದಿ ಬೇಡ. ಕೂಡಲೇ ಎಲ್ಲರನ್ನೂ ವರ್ಗಾವಣೆ ಮಾಡಿ ಬೇರೆಯವರನ್ನು ನೇಮಕ ಮಾಡಬೇಕು ಎಂದು ಪಟ್ಟು ಹಿಡಿದರು.

ವೈದ್ಯಾಧಿಕಾರಿಯ ಕಳ್ಳಾಟ: ದೊಡ್ಡಕಮರಹಳ್ಳಿ ಗ್ರಾಮದಲ್ಲಿ ಆರ್ಯುವೇದ ಆಸ್ಪತ್ರೆ ನಿರ್ಮಾಣವಾಗಿದ್ದು, ಆಯುರ್ವೇದ ವೈದ್ಯಾಧಿಕಾರಿಯನ್ನೂ ನೇಮಕ ಮಾಡಲಾಗಿದೆ. ಆದರೆ ವೈದ್ಯ ಯಾವುದೋ ಒಂದು ದಿನ ಬಂದು ಹಾಜರಾತಿಗೆ ಸಹಿ ಮಾಡಿ, ಸರ್ಕಾರದ ಔಷಧಗಳನ್ನು ಬೇರೆಡೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮಕೈಗೊಳ್ಳಬೇಕು ಎಂದರು.

ವಿಚಾರ ತಿಳಿದು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಕರುಣಾಕರ್ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ ಮನವಿ ಸ್ವೀಕರಿಸಿದರು.

ಗ್ರಾಮದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಸೂಚಿಸಲಾಗುವುದು. ಗ್ರಂಥಾಲಯ ಸಮಸ್ಯೆಗೆ ಸಂಬಂಧಿಸಿದಂತೆ ಸಂಬಂಧಪಟ್ಟವರಿಗೆ ಹಾಗೂ ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿಗೆ ನೋಟಿಸ್ ನೀಡುವ ಕುರಿತು ಕ್ರಮ ವಹಿಸಲಾಗುವುದು. ಪಂಚಾಯಿತಿ ಪಿಡಿಒ ಹಾಗೂ ಸಿಬ್ಬಂದಿ ಕಾರ್ಯ ವೈಖರಿಯನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. ಅಲ್ಲಿ ವಿಚಾರಣೆ ನಡೆಸಿ ಬಳಿಕ ಅವರ ವಿರುದ್ಧ ಕ್ರಮಕೈಗೊಳ್ಳಲಿದ್ದಾರೆ. ವೈಯಕ್ತಿಕ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಜನರು ಅರ್ಜಿ ನೀಡಬೇಕು. ಗ್ರಾಪಂ ಮಟ್ಟದಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ತಾಪಂಗೆ ಅರ್ಜಿ ಸಲ್ಲಿಸಬಹುದು ಎಂದು ಕರುಣಾಕರ್ ಹೇಳಿದರು. ಬಳಿಕ ಪ್ರತಿಭಟನೆ ಅಂತ್ಯವಾಯಿತು.

ಗ್ರಾಮ ಪಂಚಾಯಿತಿ ಸದಸ್ಯರಾದ ಅಶೋಕ್, ಸತೀಶ್, ಪರಿಕ್ಷೀತ್, ಗುರುಮೂರ್ತಿ, ಶಿವ, ಅಶೋಕ, ಕೇಶವ, ರೀಷಿ, ರಾಖಿ, ಇಂದ್ರೇಶ್, ಹರೀಶ್, ವಿಘ್ನೇಶ್, ರಾಜ, ಗಣೇಶ್ ಇದ್ದರು. ದೊಡ್ಡಕಮರಹಳ್ಳಿ ಪಂಚಾಯಿತಿಗೆ ಸಂಬಂಧಿಸಿದಂತೆ ಈ ಹಿಂದೆಯೂ ಕೂಡ ಸಾಕಷ್ಟು ದೂರುಗಳು ಬಂದಿವೆ. ಗ್ರಾಮಸ್ಥರು ಪಂಚಾಯಿತಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಮನವಿ ಸಲ್ಲಿಸಿದ್ದಾರೆ. ಕೂಡಲೇ ಅವುಗಳನ್ನು ಜಿ.ಪಂ ಸೇರಿದಂತೆ ಮೇಲಧಿಕಾರಿಗಳಿಗೆ ವರ್ಗಾವಣೆ ಮಾಡಲು ಕ್ರಮವಹಿಸಲಾಗುವುದು.
ಕೃಷ್ಣಕುಮಾರ್ ಇಒ, ತಾಲೂಕು ಪಂಚಾಯಿತಿ, ಪಿರಿಯಾಪಟ್ಟಣ

ಪ್ರತಿ ತಿಂಗಳು ಸದಸ್ಯರ ಸಭೆ ನಡೆಸಬೇಕು. ಅಲ್ಲದೆ ಸಭೆ ನಡೆಸಿದರೆ ಸರಿಯಾಗಿ ಮಾಹಿತಿ ನೀಡುವುದಿಲ್ಲ. ಸಭಾ ನಡವಳಿಕೆಯನ್ನು ಬರೆಯುವುದಿಲ್ಲ. ಇದನ್ನು ಪಿಡಿಒ ಬಳಿ ಪ್ರಶ್ನೆ ಮಾಡಿದರೆ ಉತ್ತರ ನೀಡುವುದಿಲ್ಲ. ಜನರ ಸಮಸ್ಯೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಈ ಸಂಬಂಧ 17 ಸದಸ್ಯರ ಪೈಕಿ 14 ಜನ ಸದಸ್ಯರು ಈಗಾಗಲೇ ಸಹಿ ಮಾಡಿ ನೀಡಿದ್ದು, ಯಾರೂ ಕೂಡ ಕ್ರಮಹಿಸಿಲ್ಲ.
ಅಶೋಕ್, ಗ್ರಾಪಂ ಸದಸ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net