

ಬಾಗಲಕೋಟೆ: ಜನತಾ ದರ್ಶನದ ಕಾರ್ಯಕ್ರಮದಲ್ಲಿ ಜನರು ಹೊತ್ತು ತಂದ ಸಮಸ್ಯೆಗಳಿಗೆ ಸ್ಪಂಧಿಸಿ, ಅವುಗಳನ್ನು ಇತ್ಯರ್ಥಪಡಿಸುವಲ್ಲಿ ಅಧಿಕಾರಿಗಳು ನಿರ್ವಹಿಸಿದ ಕಾರ್ಯ ತೃಪ್ತಿದಾಯಕವಾಗಿದೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಸಂತಸ ವ್ಯಕ್ತಪಡಿಸಿದರು.
ಸೀಮಿಕೇರಿ ಗ್ರಾಮದ ಲಡ್ಡುಮುತ್ಯಾ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡ ಬೀಳಗಿ ಮತಕ್ಷೇತ್ರಕ್ಕೆ ಸಂಬಂಧಿಸಿದ ಜನತಾ ದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಸರಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಜನರು ಹೊತ್ತು ತಂದ ಸಮಸ್ಯೆಗಳನ್ನು ಸಹಾನುಭೂತಿಯಿಂದ ಆಲಿಸಿ, ಕಾನೂನಾತ್ಮಕವಾಗಿ ಬಗೆ ಹರಿಯದಿದ್ದರೂ ಸಲಹೆ ಕೊಡಲು ಸಚಿವರು ತಿಳಿಸಿದರು.
ಮುಖ್ಯಮಂತ್ರಿಗಳು ಇತ್ತೀಚೆಗೆ ನಡೆಸಿದ ರಾಜ್ಯ ಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಜಿಲ್ಲೆಗೆ ಸಂಬಂಧಿಸಿದ 38 ಮನವಿಗಳು ಸ್ವೀಕೃತಗೊಂಡಿದ್ದವು. ಅದರಲ್ಲಿ 32 ಅರ್ಜಿಗಳಿಗೆ ಕ್ರಮಕೈಗೊಂಡು ಶೇ.99 ರಷ್ಟು ಪ್ರಗತಿ ಸಾಧಿಸಿದ್ದಾರೆ. ಜಿಲ್ಲಾ ಮತ್ತು ತಾಲೂಕಾ ಮಟ್ಟದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿಯೂ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಬಗೆಹರಿಯಬಹುದಾದ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹಾರ ನೀಡಲು ತುರ್ತು ಕ್ರಮಕೈಗೊಳ್ಳುತ್ತಿರುವುದನ್ನು ಶ್ಲಾಘಿಸಿದರು.
ಅಲ್ಲದೇ ಜಿಲ್ಲೆಯಲ್ಲಿ ಕೆಲವೊಂದು ಅಧಿಕಾರಿಗಳ ನಿಷ್ಕಾಳಜಿಯಿಂದ ಜಿಲ್ಲೆಯ ಪ್ರಗತಿಗೆ ಹಿನ್ನಡೆಯಾಗುತ್ತಿದ್ದು, ಅಂತವರು ತಿದ್ದಿಕೊಂಡು ಕೆಲಸ ಮಾಡುವ ಪ್ರವೃತ್ತಿ ಹೊಂದಬೇಕು. ತಿದ್ದುಕೊಳ್ಳದ ಅಸಬ್ಯ ಸೋಮಾರಿತನ ತೋರುವ ಅಧಿಕಾರಿಗಳು ಜಿಲ್ಲೆಯಲ್ಲಿ ಇರುವುದು ಬೇಡವೆಂದರು. ಅಂತಹ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ ಎಂದರು.
ಸೆಪ್ಟೆಂಬರ 25 ರಂದು ಜಿಲ್ಲಾಡಳಿತ ಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಜನತಾ ದರ್ಶನದಲ್ಲಿ ಸಾರ್ವಜನಿಕರಿಂದ 617 ಕುಂದುಕೊರತೆ ಮನಿಗಳು ಸ್ವೀಕೃತಗೊಂಡಿದ್ದವು. ಅದರಲ್ಲಿ 471 ಅರ್ಜಿ ವಿಲೇ ಮಾಡಲಾಗಿದೆ. ತೇರದಾಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವೀಕೃತವಾದ 341 ಅರ್ಜಿಗಳ ಪೈಕಿ 318 ವಿಲೇ ಮಾಡಲಾಗಿದೆ. ರಾಂಪೂರ ಗ್ರಾಮದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ 117 ಪೈಕಿ 96 ವಿಲೇ ಮಾಡಲಾಗಿರುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೀಳಗಿ ಶಾಸಕ ಜೆ.ಟಿ.ಪಾಟೀಲ ಮಾತನಾಡಿ ಸರಕಾರದ ಯೋಜನೆಗಳನ್ನು ನೇರವಾಗಿ ಜನರಿಗೆ ತಪುಲಿಸುವ ಕಾರ್ಯ ಅಧಿಕಾರಿಗಳು ಮಾಡಬೇಕು. ಬೇಜವಾಬ್ದಾರಿ ಹೇಳಿಕೆ ನೀಡದೇ ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು. ಅರ್ಹ ಕುಟುಂಬಕ್ಕೆ ಪಡಿತರ ಚೀಟಿ ಕೊಡುವ ಕಾರ್ಯವಾಗಬೇಕು. ಶಾಲಾ ಅವಧಿಯಲ್ಲಿ ಯಾವುದೇ ರೀತಿಯ ಖಾಸಗಿ ಟ್ಯೂಶನ್‍ಗಳನ್ನು ನಡೆಸುವಂತಿಲ್ಲ. ಕಂಡುಬಂದಲ್ಲಿ ಅಂತವರ ಮೇಲೆ ಸೂಕ್ತ ಕ್ರಮವಹಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು. ಸರಕಾರಿ ವಸತಿ ನಿಲಯಗಳಲ್ಲಿ ದಿನೇ ದಿನೇ ಹೆಚ್ಚುತ್ತಿದ್ದು, ಅದಕ್ಕೆ ತಕ್ಕದಂತೆ ಪ್ರಸ್ತಾವಣೆ ನೀಡಿದಲ್ಲಿ ಸರಕಾರದ ಮಟ್ಟದಲ್ಲಿ ಚರ್ಚಿಸಲಾಗುತ್ತದೆ ಎಂದರು.
ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶೀಧರ ಕುರೇರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರಾಥ ರೆಡ್ಡಿ, ಅಪರ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಉಪವಿಭಾಗಾಧಿಕಾರಿಗಳಾದ ಶ್ವೇತಾ ಬೀಡಿಕರ, ಸಂತೋಷ ಕಾಮಗೌಡ ಸೇರಿದಂತೆ ಜಿಲ್ಲಾ, ತಾಲೂಕ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.