

ಅರಸೀಕೆರೆ: ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ನಾಗರಿಕರು ಹಾಗೂ ಸರ್ಕಾರದ ಕೊಂಡಿಯಂತೆ ಕೆಲಸ ಮಾಡುವ ಉಪಯುಕ್ತ ಕಾರ್ಯಕ್ರಮವಾಗಿದ್ದು, ಸಾರ್ವಜನಿಕರು ಸ್ಥಳದಲ್ಲೇ ತಮ್ಮ ಕುಂದು, ಕೊರತೆಗಳನ್ನು ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬಹುದು ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ತಿಳಿಸಿದರು.
ತಾಲೂಕು ಆಡಳಿತದ ವತಿಯಿಂದ ಕಣಕಟ್ಟೆ ಗ್ರಾಮದಲ್ಲಿ ಶನಿವಾರ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದರು.
ತಹಸೀಲ್ದಾರ್ ವಿಭಾ ವಿ.ರಾಥೋಡ್ ಮಾತನಾಡಿ, ಸರ್ಕಾರಿ ದಾಖಲೆಗಳ ಸಮರ್ಪಕ ವಿತರಣೆ ಈ ಯೋಜನೆಯ ಉದ್ದೇಶವಾಗಿದ್ದು, ಪಹಣಿ, ಖಾತೆ, ಜಮೀನು ದುರಸ್ತಿ, ಪೋಡಿ ಮಾಡಿಸುವುದು ಸೇರಿ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಉತ್ತಮ ವೇದಿಕೆಯಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಾಮಾಜಿಕ ಭದ್ರತಾ ಯೋಜನೆಯಡಿ 15 ಫಲಾನುಭವಿಗಳಿಗೆ ಮಾಸಾಶನ ಹಾಗೂ 18 ಭಾಗ್ಯಲಕ್ಷ್ಮೀ ಬಾಂಡ್ ವಿತರಿಸಲಾಯಿತು.ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಸಲ್ಲಿಕೆಯಾಗಿದ್ದ 70 ಅರ್ಜಿಗಳ ಪೈಕಿ ಕೆಲವೊಂದು ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಯಿತು.
ಇನ್ನುಳಿದ ಅರ್ಜಿಗಳನ್ನು ಸಂಬಂಧಿಸಿದ ಇಲಾಖೆಯ ಉನ್ನತಾಧಿಕಾರಿಗಳಿಗೆ ಕಳುಹಿಸಿ ಕೊಡಲಾಯಿತು. ತಾಪಂ ಇಒ ನಾಗರಾಜ್, ಕಣಕಟ್ಟೆ ಗ್ರಾಪಂ ಅಧ್ಯಕ್ಷ ಪ್ರಜ್ವಲ್, ಉಪತಹಸೀಲ್ದಾರ್ ವೆಂಕಟೇಶ್ ಪ್ರಸನ್ನ, ತಾಲೂಕು ಆರೋಗ್ಯಾಧಿಕಾರಿ ಡಾ.ತಿಮ್ಮರಾಜು, ಶಿರಸ್ತೆದಾರ್ ಶಿವಶಂಕರ್, ಕಂದಾಯಾಧಿಕಾರಿ ಶಾಂತಕುಮಾರ್ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.